Index   ವಚನ - 1189    Search  
 
ಮಲತ್ರಯಂಗಳಲ್ಲಿ ಕುದಿಯಲೀಯದೆ, ಮನಸಿಜನ ಬಾಣಕ್ಕೆ ಗುರಿಯಾಗಲೀಯದೆ, ಎನ್ನ ತನ್ನಂತೆ ಮಾಡಿದನಯ್ಯಾ ಶ್ರೀಗುರು. ಪದ ನಾಲ್ಕು ಮೀರಿ ಭವಕ್ಕೆ ಹೇತುವಾಗಲೀಯದೆ, ಕರುಣಿಸಿ ಮುಕ್ತನ ಮಾಡಿದೆಯಯ್ಯಾ, ಶ್ರೀಗುರುವೆ, ಪರಮಗುರುವೆ. ಪರಿಭವಕ್ಕೆ ಬರಲೀಯದಂತೆ, ಎನ್ನ ನಿಮ್ಮವರೊಳಗೊಬ್ಬನೆಂದೆನಿಸಿದೆಯಲ್ಲಾ, ಗುರುವೆ, ಪರಮಗುರುವೆ, ಕಾಲನ ಕಮ್ಮಟಕ್ಕೆ ಗುರಿಯಹ ಎನ್ನನು ತೆಗೆದು, ಗುರು ಲಿಂಗ ಜಂಗಮ ತ್ರೈಲಿಂಗಕ್ಕೆ ಕಾರಣಿಕನ ಮಾಡಿದೆ. ಇನ್ನು ಭವಕ್ಕೆ ಬಾರೆನು; ನಿನ್ನವರಾದಂತೆ ಅಪ್ಪೆನು. ಕಪಿಲಸಿದ್ಧಮಲ್ಲಿಕಾರ್ಜುನಾ , ಎನ್ನ ಮೀರಿದ ಪರ ಒಂದೂ ಇಲ್ಲ.