Index   ವಚನ - 1273    Search  
 
ಇಹಲೋಕ ಪರಲೋಕವೆಂಬ ಸಂದಳಿಯಿತ್ತಯ್ಯಾ. ಗುರುವಿನ ಹಸ್ತದಲ್ಲಿ ಸತ್ತು, ಪಂಚಾಕ್ಷರಿಯಿಂದೆತ್ತಿದ ಕಾರಣದಲ್ಲಿ ; ನಿತ್ಯವೂ ಲಿಂಗಾರ್ಚನೆಯ ಮಾಡುವ ಕಾರಣದಲ್ಲಿ; ನಿತ್ಯವೂ ವಿಭೂತಿ ರುದ್ರಾಕ್ಷಿಯ ಧಾರಣ ಮಾಡುವ ಕಾರಣದಲ್ಲಿ; ಇಹಲೋಕವೆಂದೇನು, ಪರಲೋಕವೆಂದೇನು, ಹಂಗು ಹರಿದು ಒಂದಾದ ಬಳಿಕ? ಮಲಮದಂಗಳು ಹರಿದು ನಾನು ನೀನಾದ ಬಳಿಕ? ಎಲೆ ಅಯ್ಯಾ, ಭಕ್ತರ ಸರ್ವಾಂಗ ಲಿಂಗತನು; ಭಕ್ತರಿಪ್ಪ ಲೋಕವೆ ರುದ್ರಲೋಕ. ಗುರುವೆ, ಕಪಿಲಸಿದ್ಧಮಲ್ಲಿಕಾರ್ಜುನಯ್ಯಾ, ನಿನ್ನ ಹಸ್ತವ ಮಸ್ತಕದಲ್ಲಿಟ್ಟಡಾಯಿತ್ತು! .