ವಚನ - 1341     
 
ಅಯ್ಯಾ ಅಯ್ಯಾ, ನೀವು ಬಾರದಿರ್ದಡೆ ಅಂತು ಹಂಬಲಿಸುತ್ತಿದ್ದೆ. ನೀನೆನ್ನ ಹಂಬಲ ಕೇಳಿ ಕರುಣದಿಂದ ಭೋರನೆ ಬಂದಡೆ, ಆನು ತಳವೆಳಗಾಗಿ ಅವಗುಣವೆಂಬ ರಜವ ಕಳೆದು ಕಂಬಳಿಯ ಪೀಠವನೊಲ್ಲದೆ ಹೃದಯಪೀಠವನಿಕ್ಕಿ ಮೇಲುಪ್ಪರಿಗೆಯೊರತೆಯ ಅಗ್ಗಣಿಯ ತಂದು ಪಾದಾರ್ಚನೆಯ ಮಾಡಿ, ಎರಡೆಸಳ ಕಮಲವನೆರಡು ಪಾದಕ್ಕೆ ಪೂಜಿಸಿ, ಕಂಗಳ ತಿರುಳ ತೆಗೆದು ಆರತಿಯನೆತ್ತಿ, ಉಸುರ ನುಂಗಿದ ಪರಿಮಳದ ಧೂಪವ ಬೀಸಿ, ನೆತ್ತಿಯ ಪರಿಯಾಣದೊಳಿಟ್ಟು ಬೋನವ ಗಡಣಿಸಿದಡೆ, ಸಯದಾನ ಸವೆಯದೆ ಆರೋಗಣೆಯ ಮಾಡಿ, ಉಂಡ ಬಾಯ ತೊಳೆದಡೆ ಸಂದೇಹವಾದುದೆಂದು ಮೇಲು ಸೆರಗಿನೊಳು ತೊಡೆದುಕೊಂಡು ಬಾಯ ಮುಚ್ಚಳ ತೆಗೆಯದೆ, ತ್ರಿಕರಣವೆಂಬ ತಾಂಬೂಲವನವಧರಿಸಿದ, ಭಾವದ ಕನ್ನಡವ ಹರಿದುಹಾಯ್ಕಿದ, ಆತನ ಪಾದಕ್ಕೆ ನಾನು ಶರಣೆಂದು ಪಾದೋದಕವ ಕೊಂಡೆ. ಆತನ ಪ್ರಸಾದಕ್ಕೆನ್ನ ಸೆರಗ ಹಾಸಿ ಆರೋಗಿಸಿ ಸುಖಿಯಾದೆನು. ಕಪಿಲಸಿದ್ಧಮಲ್ಲಿಕಾರ್ಜುನಯ್ಯಾ, ನಿಮ್ಮ ಶರಣ ಪ್ರಭುದೇವರ ಕರುಣವೆನಗೆ ಸಾಧ್ಯವಾದ ಪರಿಯನೇನೆಂದುಪಮಿಸುವೆ!