ವಚನ - 1391     
 
ಹಸಿವು ತೃಷೆಯಳಿದಡೇನು, ಭಕ್ತನಪ್ಪನೆ? ಅಲ್ಲಲ್ಲ. ಅಷ್ಟಮಹಾಸಿದ್ಧಿಯುಳ್ಳಡೇನು, ಭಕ್ತನಪ್ಪನೆ? ಅಲ್ಲಲ್ಲ. ತನು ಬಯಲಾಗಿ ಚತುರ್ವಿಧ ಪದಸ್ಥನಾಗಿ ಕೈಲಾಸದಲ್ಲಿದ್ದಡೇನು, ಭಕ್ತನಪ್ಪನೆ? ಅಲ್ಲಲ್ಲ. ಗಿಡಗಳ ತಿಂದ ಬಳಿಕ ಹಸಿವು ತೃಷೆ ತೋರದು. ಯೋಗವಂಗವಾದ ಬಳಿಕ ಸ್ವೇಚ್ಛಾಚಾರ ಬಿಡದು. ಅಘೋರತಪವ ಮಾಡಿದ ಬಳಿಕ ಮಹಾಸಿದ್ಧಿಗಳು ಬಿಡವು. ಒಂದೊಂದರಿಂದೊಂದೊಂದು ಸಿದ್ಧಿ. ಅಂಗ ಮೂರರಲ್ಲಿ ಲಿಂಗ ಸಂಬಂಧವಾಗಿ, ಲಿಂಗ ಮೂರರಲ್ಲಿ ವಸ್ತುತ್ರಯವ ಪೂಜಿಸಿ, ತತ್ಪ್ರಸಾದಗ್ರಾಹದ ಭಕ್ತನಲ್ಲದೆ, ಬಾಲಬ್ರಹ್ಮಿಗೆ ಭಕ್ತನೆನಬಹುದೇನಯ್ಯಾ, ಕಪಿಲಸಿದ್ಧಮಲ್ಲಿಕಾರ್ಜುನಾ?