ವಚನ - 1432     
 
ಆದಿಯಾಧಾರದಲ್ಲಿ ಆದಿಯಿಲ್ಲದ ಮುನ್ನ, ಅನಾದಿ ಸಂಸಿದ್ಧನಯ್ಯಾ ಬಸವಣ್ಣನು. ಲೋಕವೀರೇಳರ ಆಕಾರವಿಲ್ಲದಲ್ಲಿ, ಏಕೈಕರೂಪನಯ್ಯಾ ಚೆನ್ನಬಸವಣ್ಣನು. ಸಾಕಾರದಿಂದತ್ತ ನಿರ್ಮಾಯ ಬಂದನು, ಲೋಕಪಾವನಮೂರ್ತಿ ಪ್ರಭುರಾಯನು. ಇಂತೆನ್ನ ಭವದ ಬೇರ ಹರಿದು ಹದುಳ ಮಾಡಿ ಶರಣರೊಳಗಿರಿಸಿದ ಗುರು ಇಂತು ಮೂವರಯ್ಯಾ, ಕಪಿಲಸಿದ್ಧಮಲ್ಲಿಕಾರ್ಜುನಯ್ಯಾ.