ವಚನ - 1436     
 
ಒಂದೆ ವಸ್ತು ಭೇದವಾಗಿ ಕಾಡಿತ್ತಯ್ಯಾ: ಎನ್ನ ದೇಹ ವಸ್ತುವೆಂದಡೆ, ಹಲವು ರೂಪಾಗಿ ತೋರಿತ್ತು, ಕಾರಣ ವಸ್ತುವೆಂದಡೆ, ಸ್ಥೂಲಸೂಕ್ಷ್ಮ ತಿಳಿಯದೆ ಹೋಯಿತ್ತು, ಕಾರಣಾತೀತವೆಂದಡೆ, ಸಾಕ್ಷಿಯಾಗಿ ಕ್ರಿಯಂಗಳ ಮಾಡಿಸಿತ್ತು. ಸಾಕ್ಷಿಯಾಗಿ ನಿಂದರಿವೆ ವಸ್ತುವೆಂದಡೆ, ಚೇತನವಾಗಿ ನಿಂದಿತ್ತು. ಇದರಿರವ ಬಲ್ಲಾತನೆ ಭಕ್ತ, ನೋಡಿ ಬಯಲಾದಾತನೆ ಜಂಗಮ, ಬಯಲಾಗಿ ರೂಪಕ್ಕೆ ಬಂದಾತನೆ ಪ್ರಾಣಲಿಂಗಿ ನೋಡಯ್ಯಾ, ಕಪಿಲಸಿದ್ಧಮಲ್ಲಿಕಾರ್ಜುನಾ.