ಲೋಕದಲ್ಲಿಹ ನೂರಾರು ಗುರುಗಳ ನೋಡಿ ನೋಡಿ
ನಾನು ಬೇಸರುಗೊಂಡೆನಯ್ಯಾ.
ವಿತ್ತಾಪಹಾರಿ ಗುರುಗಳು ನೂರಾರು;
ಶಾಸ್ತ್ರಾರ್ಥ ಹೇಳುವ ಗುರುಗಳು ನೂರಾರು;
ಮಂತ್ರತಂತ್ರದಿಂದುಭಯ ಲೋಕದಲ್ಲಿ
ಸುಖದುಃಖವೀವ ಗುರುಗಳು ನೂರಾರು;
ಸತ್ಕರ್ಮೋಪದೇಶವನರುಹಿ
ಸ್ವರ್ಗಮರ್ತ್ಯದಲ್ಲಿ ಸುಖವೀವ
ಗುರುಗಳು ನೂರಾರು;
ವಿಚಾರಮುಖದಿಂದ ಷಟ್ಸಾಧನೆಯನರುಹುವ
ಗುರುಗಳು ನೂರಾರು.
ವಿಷಯಂಗಳೆಲ್ಲ ಮಿಥ್ಯಂಗಳೆಂದರುಹಿ
ಆತ್ಮಾನುರಾಗತ್ವವನೀವ ಗುರುಗಳು ನೂರಾರು;
ಶಿವಜೀವರ ಏಕತ್ವವನರುಹಿ
ನಿರ್ಮಲಜ್ಞಾನವೀವ ಗುರುಗಳು ನೂರಾರು;
ಸಂಶಯಾಳಿಗಳನೆಲ್ಲ ಜ್ಞಾನಾಗ್ನಿಯಿಂದ ದಹಿಸಿ
ಮುಕ್ತಿಯ ಹಂಗೆಂಬುದ ಅರುಹಿನ ಬಂಧದಲ್ಲಿರಿಸಿದ ಗುರು
ಚೆನ್ನಬಸವಣ್ಣನಲ್ಲದೆ ಮತ್ತೋರ್ವನ ಕಾಣೆ ನೋಡಾ,
ಕಪಿಲಸಿದ್ಧಮಲ್ಲಿಕಾರ್ಜುನಾ.