Index   ವಚನ - 1    Search  
 
ಕ್ರೀಯಲ್ಲಿ ವಸ್ತುವಿಪ್ಪುದೆ ದಿಟವಾದಡೆ, ತಿಳಿದು ನೋಡಿದಲ್ಲಿ, ವಸ್ತುವಿನಲ್ಲಿ ಕ್ರೀ ಇಪ್ಪುದೆ ದಿಟ. ಇಂತು ಇನ್ನೀ ಉಭಯವ ತಿಳಿದು ನೋಡಿದಲ್ಲಿ, ವಸ್ತುವಿಂಗೂ ಕ್ರೀಗೂ ಭಿನ್ನ ಉಂಟೆ? ಅದೆಂತೆಂದಡೆ : ಸಕ್ಕರೆಯ ಕುಂಭವೆನಲಿಕೆ, ತುಪ್ಪದ ಕಂದಳೆನಲಿಕೆ, ಕರ್ಪುರದ ಕರಂಡವೆನಲಿಕೆ, ಆ ವಸ್ತು ದೃಷ್ಟ ದಿಟವೆ? ಕುಂಭ ಸಕ್ಕರೆಯಲ್ಲ, ಸಕ್ಕರೆ ಕುಂಭವಲ್ಲ, ತುಪ್ಪ ಕಂದಳಲ್ಲ, ಕಂದಳ ತುಪ್ಪವಲ್ಲ, ಕರಂಡ ಕರ್ಪುರವಲ್ಲ, ಕರ್ಪುರ ಕರಂಡವಲ್ಲ. ಅಲ್ಲಿದ್ದ ವಸ್ತು ಹೋದ ಮತ್ತೆ ಉಪದೃಷ್ಟದ ಮಾತಡಗಿತ್ತು. ಬಣ್ಣವಿಲ್ಲದ ಮತ್ತೆ ಬಂಗಾರವೆಂಬ ಕುರುಹುಂಟೆ? ಸಕ್ಕರೆ ತುಪ್ಪ ಕರ್ಪುರ ಹೋದ ಮತ್ತೆ, ಘಟವಲ್ಲದ ವಸ್ತು ನಾಮವಿಲ್ಲ. ವಸ್ತು ವಸ್ತುಕದಂತೆ, ಘಟ ಆತ್ಮನಂತೆ, ಉಭಯಕ್ಕೂ ಭಿನ್ನವಿಲ್ಲದೆ ಸಿದ್ಧಿಯಾಗಿ, ಆ ಸಿದ್ಧಿ ಪ್ರಸಿದ್ಧಿಯಾಗಿ, ಆ ಪ್ರಸಿದ್ಧಿ ಪ್ರಸನ್ನವಾಗಿ, ಆ ಪ್ರಸನ್ನ ಪ್ರಸಂಗಕ್ಕೆ ಒಡಲರತುದು, ಗೋಳಕಾಕಾರ ವಿಶ್ವವಿರಹಿತಲಿಂಗವು ತಾನಾದುದು.