ಗಾಜಿನ ಕುಪ್ಪಿಗೆಯಲ್ಲಿ ನೀರೆಣ್ಣೆಯ ಹೊಯ್ಯಲಿಕ್ಕಾಗಿ,
ನೀರೂ ಎಣ್ಣೆಯೂ ಬೇರಾಗಿ ತೋರೂದು.
ಆಧಾರ ಗುಣವೆಂದು ನಿಧಾನಿಸಿಕೊಂಡು ನೋಡಲು,
ಕುಪ್ಪಿಗೆಯ ಒಪ್ಪವೊ?
ನೀರು ಎಣ್ಣೆ ಅದರೊಳಗೊಪ್ಪಿಹ ಭೇದವೊ?
ಕುಪ್ಪಿಗೆಯ ಗುಣವೆಂದಡೆ ನೀರೆಣ್ಣೆ ಸೇರಿದ ಮತ್ತೆ ,
ಕುಪ್ಪಿಗೆಯಲ್ಲಿ ಕೃತ್ರಿಮ ಒಂದೂ ಇಲ್ಲಾ ಎಂದಡೆ ದೃಷ್ಟವಿರೋಧ.
ಅದೆಂತೆಂದಡೆ :
ಆ ಅಂಗ ತಾಳ್ದುದರಿಂದ ಪೃಥಕ್ಕಿಟ್ಟು ಅಂಗ ಬೇರಾಯಿತ್ತು.
ಮತ್ತೆ ಮೃತ್ತಿಕೆಯ ಅಂಗದಲ್ಲಿ ಎಣ್ಣೆ ನೀರ ತುಂಬಿ ನೋಡಲಿಕ್ಕಾಗಿ
ಬಾಹ್ಯವಿದಿರಲ್ಲಿ ಒಂದೂ ಕಾಣಬಂದುದಿಲ್ಲ.
ಈ ಗುಣ ಘಟಹೊರೆಯ ಭೇದ,
ಆತ್ಮದಿರವಿನ ಘಟ, ಸಂಸರ್ಗಿಯ ಭಾವ.
ಇದ ತಿಳಿವುದು ಕುಟಿಲರಿಗೆ ಅಸಾಧ್ಯ.
ಅಕುಟಿಲರಿಗೆ ಸಾಧ್ಯವೇದ್ಯ,
ಗೋಳಕಾಕಾರ ವಿಶ್ವವಿರಹಿತ ಲಿಂಗವು.