Index   ವಚನ - 1    Search  
 
ಅಂಗದ ಮೇಲೆ ಲಿಂಗವ ಬಿಜಯಂಗೈಸಿಕೊಂಡು, ಲಿಂಗವಿಲ್ಲದಂಗನೆಯರನಪ್ಪಿದಡೆ, ಸುರಾಭಾಂಡವನಪ್ಪಿದಂತೆ ಕೇಳಿರಣ್ಣ. ಲಿಂಗಸಾಹಿತ್ಯವಾಗಿರ್ದು, ಲಿಂಗವಿಲ್ಲದ ಸತಿಯರ ಕೂಡಿಕೊಂಡಿಹ ಪರಿಯೆಂತಯ್ಯ! ಲಿಂಗವುಳ್ಳ ತನು ಲಿಂಗವಿಲ್ಲದ ತನುವಿನೊಡನೆ ಸಂಯೋಗಮಂ ಮಾಡಿದಡೆಂತಕ್ಕು, ಹಾಲಗಡಿಗೆಯ ಹಂದಿ ಮುಟ್ಟಿದಂತಕ್ಕು! ಅದೆಂತೆಂದಡೆ: ಲಿಂಗೇನ ಸಹಿತೋ ದೇಹೀ ಲಿಂಗಹೀನಾಂ ತು ಯಃ ಸತೀಮ್ | ಸಹವಾಸೇ ಸಹತೇ ನಿತ್ಯಂ ಕಿಂ ಫಲಂ ಕಿಂ ಕೃತಂ ಭವೇತ್ || ಕಿಂ ತೇನ ಕ್ಷೀರಭಾಂಡೇನ ಸೂಕರೈಃ ಸಹ ವರ್ತಿನಾ | ಎಂದುದಾಗಿ, ಲಿಂಗವುಳ್ಳ ಲಿಂಗಾರ್ಚಕರು ಲಿಂಗೈಕ್ಯರು, ಲಿಂಗವಿಲ್ಲದೆ ಭವಿಯಾಗಿರ್ದ ಸತಿಯರ ಆಲಿಂಗನ, ಚುಂಬನವ ಮಾಡಿದಡೆ, ಗುರುಕಾರುಣ್ಯ ಉಂಟೆಂದು ಸಾಧಾರಣ ಪಕ್ಷದಲ್ಲಿ ಮಾಡಿಕೊಂಡಿರ್ದಡೆ, ಮಾಡಿದ ಲಿಂಗಾರ್ಚನೆ ನಿಷ್ಫಲಂ. ಶತಜನ್ಮ ಪರಿಯಂತರ ಹೊಲೆಯರಲ್ಲಿಕ್ಕದೆ ಮಾಣ್ಬನೆ, ನಮ್ಮ ದೇವರಾಯ ಸೊಡ್ಡಳ.