Index   ವಚನ - 65    Search  
 
ಭೃಗುಮುನೀಶ್ವರನ ಶಾಪದಿಂದ ವಿಷ್ಣು ದಶಾವತಾರವಾಗಿ ಬಂದಲ್ಲಿ, ಶಿವಭಕ್ತಿಯನೆ ಮಾಡಿದನೆಂಬುದಕ್ಕೆ ಶಿವಧರ್ಮಪುರಾಣ ಪ್ರಸಿದ್ಧ ನೋಡಿ. ಅದೆಂತೆಂದಡೆ: ಮತ್ಸ್ಯ ಕೂರ್ಮೋ ವರಾಹಶ್ಚ ನಾರಸಿಂಹಶ್ಚ ವಾಮನಃ | ರಾಮೋ ರಾಮಶ್ಚ ರಾಮಶ್ಚ ಬೌದ್ಧಶ್ಚ ಕಲಿ ಕಾಹ್ವಯಃ || ಎಂದುದಾಗಿ, ಶಿವಲಿಂಗವ ಹರಿ ಪ್ರತಷ್ಠೆಯ ಮಾಡಿದ. ಮತ್ಸ್ಯಾವತಾರದಲ್ಲಿ ಮತ್ಸ್ಯಕೇಶ್ವರದೇವರ ಲಂಕಾಪುರಿಯಲ್ಲಿ ಶಿವಲಿಂಗವ ಹರಿ ಪ್ರತಿಷ್ಠೆಯ ಮಾಡಿದ. ಕೂರ್ಮಾವತಾರದಲ್ಲಿ ಕೂರ್ಮೇಶ್ವರದೇವರ ಧಾರಾವತಿಯಲ್ಲಿ ಶಿವಲಿಂಗವ ಹರಿ ಪ್ರತಿಷ್ಠೆಯ ಮಾಡಿದ. ವರಾಹವತಾರದಲ್ಲಿ ವರಾಹೇಶ್ವರದೇವರ ವೃಂದಗಿರಿಯಲ್ಲಿ ಶಿವಲಿಂಗವ ಹರಿ ಪ್ರತಿಷ್ಠೆಯ ಮಾಡಿದ. ವಾಮನಾವತಾರದಲ್ಲಿ ವಾಮೇಶ್ವರದೇವರ ವಾರಣಾಸಿಯಲ್ಲಿ ಶಿವಲಿಂಗವ ಹರಿ ಪ್ರತಿಷ್ಠೆಯ ಮಾಡಿದ. ರಾಮಾವತಾರದಲ್ಲಿ ರಾಮೇಶ್ವರದೇವರ ಸೇತುವಿನಲ್ಲಿ ಶಿವಲಿಂಗವ ಹರಿ ಪ್ರತಿಷ್ಠೆಯ ಮಾಡಿದ. ನಾರಸಿಂಹಾವತಾರದಲ್ಲಿ ನರಸಿಂಹೇಶ್ವರದೇವರ ಆವು ಬಳದಲ್ಲಿ ಶಿವಲಿಂಗವ ಹರಿ ಪ್ರತಿಷ್ಠೆಯ ಮಾಡಿದ ಬೌದ್ಧಾವತಾರದಲ್ಲಿ ಬೌದ್ಧಕಲಿಕೆಯೆಂಬ ಹೆಸರ ದೇವರ ಕಾಶಿಯಲ್ಲಿ ಶಿವಲಿಂಗವ ಹರಿ ಪ್ರತಿಷ್ಠೆಯ ಮಾಡಿದ. ಪರಶುರಾಮಾವತಾರದಲ್ಲಿ ಪರಶುರಾಮೇಶ್ವರದೇವರ ಕಪಿಲೆಯ ತೀರದಲ್ಲಿ ಶಿವಲಿಂಗವ ಹರಿ ಪ್ರತಿಷ್ಠೆಯ ಮಾಡಿದ. ಕೃಷ್ಣಾವತಾರದಲ್ಲಿ ಕೃಷ್ಣೇಶ್ವರದೇವರ ಹಿಮವತ್ಪರ್ವತದಲ್ಲಿ ಶಿವಲಿಂಗವ ಹರಿ ಪ್ರತಿಷ್ಠೆಯ ಮಾಡಿದ. ಕಲಿಯುಗದಲ್ಲಿ ಸ್ತ್ರೀ ರೂಪಿಂದ ಅಗಲಕ್ಕೆ ನಿಂದ. ಇಂತೀ ದಶಾವತಾರದಲ್ಲಿಯೂ ಹರಿಯೆ ಭಕ್ತ. ಹರಿಯ ಬಿಟ್ಟು ಭಕ್ತರಿಲ್ಲ. ಸೊಡ್ಡಳದೇವರಿಂದ ಬಿಟ್ಟು ಕರ್ತರಿಲ್ಲ ಕೇಳಿರಣ್ಣಾ.