ಭವಿಯ ಕಳದು ಭಕ್ತನ ಮಾಡಿದ ಬಳಿಕ,
ಲಿಂಗಾಂಗಸಂಬಂಧಿಯಾಗಿ ಸರ್ವಭೋಗಂಗಳನು
ಲಿಂಗ ಮುಂತಾಗಿ ಭೋಗಿಸುತ್ತ,
ಷಡುರಸಂಗಳನು ಮುಂದೆ ಗಡಣಿಸಿಕೊಂಡು,
ಆಚಾರಾದಿ ಮಹಾಲಿಂಗಂಗಳಿಗೆ ನಿವೇದಿಸುತ್ತ,
ಗುರು ಮುಟ್ಟಿ ಶುದ್ಧಪ್ರಸಾದ, ಲಿಂಗ ಮುಟ್ಟಿ ಸಿದ್ಧಪ್ರಸಾದ,
ಜಂಗಮ ಮುಟ್ಟಿ ಪ್ರಸಿದ್ಧಪ್ರಸಾದ.
ಇಂತೀ ತ್ರಿವಿಧವ ಇಷ್ಟ ಪ್ರಾಣ ಭಾವಕ್ಕೆ ಸಂಬಂಧಿಸುತ್ತ,
ರೂಪು ರುಚಿ ತೃಪ್ತಿಯನರಿದು,
ಪ್ರಸನ್ನಪ್ರಸಾದವ ಭೋಗಿಸುವಲ್ಲಿ,
ಭವಿದೃಷ್ಟಿ ಸೋಂಕುತ್ತಿರಲು,
ಸಂಕಲ್ಪಿಸಿ ಬಿಟ್ಟಡೆ ಪ್ರಸಾದದ್ರೋಹ, ಕೊಂಡಡೆ ಭವಿದೃಷ್ಟಿ ಕಿಲ್ಬಿಷ.
ಬಿಡಲೂ ಬಾರದು, ಕೊಳ್ಳಲೂ ಬಾರದು ನೋಡಯ್ಯ.
ಇನ್ನೇನೆಂದು ಚಿಂತಿಸಬೇಡ,
ಎಲ್ಲವೂ ಮಹಾಪ್ರಸಾದದಿಂದಲೇ ಹುಟ್ಟಿದವು.
ಆ ಮಹಾಪ್ರಸಾದವನೆ ಉಂಡು ಬೆಳೆದವು,
ಆ ಮಹಾಪ್ರಸಾದದಲ್ಲಿಯ ಲಯ.
ಸರ್ವವೆಲ್ಲವೂ ಶಿವನಿಂದಲೇ ಹುಟ್ಟಿದವು.
ಶಿವನೇ ಶರಣ, ಶರಣನೇ ಶಿವ ನೋಡಯ್ಯ.
ಎಲ್ಲವೂ ತನ್ನಿಂದಲಾದ ಬಳಿಕ,
ಭವಿಯೆಂಬುದು ಎಲ್ಲಿಯದು ಹೇಳಾ.
ಪರಿಪೂರ್ಣ ತಾನಾದ ಬಳಿಕ,
ಸಂಕಲ್ಪಿಸಲಾಗದು ನೋಡಾ,
ಮಹಾದಾನಿ ಸೊಡ್ಡಳಾ.
Art
Manuscript
Music
Courtesy:
Transliteration
Bhaviya kaḷadu bhaktana māḍida baḷika,
liṅgāṅgasambandhiyāgi sarvabhōgaṅgaḷanu
liṅga muntāgi bhōgisutta,
ṣaḍurasaṅgaḷanu munde gaḍaṇisikoṇḍu,
ācārādi mahāliṅgaṅgaḷige nivēdisutta,
guru muṭṭi śud'dhaprasāda, liṅga muṭṭi sid'dhaprasāda,
jaṅgama muṭṭi prasid'dhaprasāda.
Intī trividhava iṣṭa prāṇa bhāvakke sambandhisutta,
rūpu ruci tr̥ptiyanaridu,
prasannaprasādava bhōgisuvalli,
bhavidr̥ṣṭi sōṅkuttiralu,
saṅkalpisi biṭṭaḍe prasādadrōha, koṇḍaḍe bhavidr̥ṣṭi kilbiṣa.
Biḍalū bāradu, koḷḷalū bāradu nōḍayya.
Innēnendu cintisabēḍa,
ellavū mahāprasādadindalē huṭṭidavu.
Ā mahāprasādavane uṇḍu beḷedavu,
ā mahāprasādadalliya laya.
Sarvavellavū śivanindalē huṭṭidavu.
Śivanē śaraṇa, śaraṇanē śiva nōḍayya.
Ellavū tannindalāda baḷika,
bhaviyembudu elliyadu hēḷā.
Paripūrṇa tānāda baḷika,
saṅkalpisalāgadu nōḍā,
mahādāni soḍḍaḷā.