ಎಲೆ ಅಯ್ಯಾ, ನೀವು ನಿರಾಕಾರವಾಗಿರ್ದಿರಾಗಿ,
ಆ ನಿರಾಕಾರವೆ ಪಂಚಮದಲ್ಲಿ ನಿಂದಡೆ ನಾದ ತೋರಿತ್ತು.
ಆ ನಾದದಲ್ಲಿ ಬಿಂದು ತೋರಿತ್ತು.
ಆ ನಾದ ಬಿಂದುಗಳನೊಡೆದು ಮೂಡಿ,
ನಿರುಪಾಧಿಕ ಜ್ಯೋತಿಯಂತೆ ಸಕಲ ನಿಃಕಲ ರೂಪಾದಿರಯ್ಯ.
ರವಿಕೋಟಿ ತೇಜ ಪರಿಪೂರ್ಣ ಮೂಲಚೈತನ್ಯ ರೂಪು
ನೀವು ಕಂಡಯ್ಯ.
ಭೇದಿಸಬಾರದಭೇದ್ಯ ಸಾಧಿಸಬಾರದಸಾಧ್ಯ ನೀವು ಕಂಡಯ್ಯ.
ನಿಮ್ಮ ಸಹಜದ ನಿಲವನಾರು ಬಲ್ಲರು?
ನಿಮ್ಮಿಂದ ನೀವೇ ರೂಪಾದಿರಯ್ಯ.
ನಿಮ್ಮ ಪರಿಣಾಮಪದದಲ್ಲೊಂದನಂತಕಾಲವಿರ್ದಿರಯ್ಯ,
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರ.