Index   ವಚನ - 18    Search  
 
ಆದಿ ಮಧ್ಯಾವಸಾನಂಗಳಿಂದತ್ತತ್ತಲಾದ ಶಿವಾಂಗರೂಪ ತಾನೆಂದರಿಯದೆ, ನಿತ್ಯ ನಿರ್ಗುಣ ನಿರವಯ ಅಗಣಿತ ಅಕ್ಷಯ ತಾನೆಂದರಿಯದೆ, ನಿತ್ಯೋದಿತ ಸ್ವಯಂಪ್ರಕಾಶ ತಾನೆಂದರಿಯದೆ, ಸರ್ವಗತ ಸರ್ವಜ್ಞ ಸರ್ವಶಕ್ತಿಯನುಳ್ಳ ಪರಮಾತ್ಮ ತಾನೆಂದರಿಯದೆ, ಮಹದಾದಿ ತತ್ವಂಗಳ ಮೇಲಿಹ ಸಚ್ಚಿದಾನಂದರೂಪ ತಾನೆಂದರಿಯದೆ, ಅಜ್ಞಾನದ ಬಲದಿಂದ ಅಹಂಕಾರವಶನಾಗಿ, ನಾನು ಕರ್ತನು, ನಾನು ಭೋಕ್ತನೆಂದು ಬಗೆದು, ಇಲ್ಲದ ಮಾಯಾ ಮೋಹರೂಪಾದ ಕರ್ಮಜನ್ಯ- ಸಂಸಾರವ ಹೊಂದಿಸಿಕೊಂಡು, ತನ್ನ ನಿಜಸ್ವರೂಪವನರಿಯದೆ, ಶಿವ ಪ್ರಸಾದವ ಪಡೆದು ಶಿವನೊಳಗಾಗದವರು ಎಂದೆಂದೂ ಭವದಲ್ಲಿ ಬಳಲುತ್ತಿಹರು ಕಾಣಾ, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ.