Index   ವಚನ - 84    Search  
 
ಆದ್ಯರ ವಚನವ ಕೇಳಿ, ವೇದಾಗಮಂಗಳ ತಿಳಿದು, ಶ್ರೀವಿಭೂತಿಯ ಧಾರಣವೆ ಮುಖ್ಯವೆಂದರಿದು ಧರಿಸಿರಣ್ಣ. ಇಂತಿದನರಿಯದೆ, ಶಿವದೀಕ್ಷೆಯ ಮಾಡಿದರೂ ದೀಕ್ಷೆಯ ಪಡೆದರೂ ಫಲವಿಲ್ಲ. ಶಿವಮಂತ್ರಸ್ಮರಣೆ ತಪಯಜ್ಞಂಗಳ ಮಾಡಿದಲ್ಲಿಯೂ ಫಲವಿಲ್ಲ. ಆತಂಗೆ ವಿದ್ಯೆಯು ದೇವತೆಗಳು ಆಗಮಜ್ಞಾನವು ಇಲ್ಲ. `ನ ದೀಕ್ಷಾ ನ ತಪೋ ಮಂತ್ರಂ ನ ಯಜ್ಞೋ ದೇವತಾ ನ ಚ ವಿದ್ಯಾ ನೈವಾಗಮಜ್ಞಾನಂ ಭಸ್ಮಮಾಹಾತ್ಮವರ್ಜಿತೇ' ಎಂದುದಾಗಿ: ಇದು ಕಾರಣ, ಶ್ರೀವಿಭೂತಿಯ ಮಹಾತ್ಮೆಯನರಿದು ಧರಿಸಲು, ಸರ್ವಸಿದ್ಧಿಯಪ್ಪುದು. ಬಳಿಕ ನಮ್ಮ ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನೊಳಗಿಪ್ಪನು.