Index   ವಚನ - 95    Search  
 
ರೂಪು ಕುರೂಪು ವಿಕಾರಂಗಳು ಮುಕುರವ ನೋಡುವರ ಗುಣವಲ್ಲದೆ ಮುಕುರಕ್ಕೆ ವಿಕಾರಗುಣವುಂಟೆ? ಪಾಪಿಗಳು ಕೋಪಿಗಳು ಪರಿಭ್ರಷ್ಟರು ಅಸತ್ಯರು ಅಜ್ಞಾನಿಗಳು ಸಂಸಾರಿಗಳು ದುರ್ವಿಕಾರಿಗಳು ಲಂಡರು ಕೊಂಡೆಯರು ಕುಚಿತ್ತರು ಅನ್ಯಾಯಕಾರಿಗಳು ತಮ್ಮ ತಮ್ಮ ಗುಣದಂತೆ ತಿಳಿದು ನೋಡಿ ಮಾಡಿದರು ಬಿತ್ತಿದ ಬೆಳೆಯನುಂಬಂತೆ. ನಿಂದಿಸಿದವರು ಪಾಪದ ಫಲವನನುಭವಿಸುವರು. ಸ್ತುತಿಸಿದವರು ಪುಣ್ಯದ ಫಲವನನುಭವಿಸುವರು. ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರ, ನಿಮ್ಮ ಸತ್ಯಶರಣ ನಿತ್ಯಮುಕ್ತಂಗೆ, ನಿಂದೆ ಸ್ತುತಿಯೆಂಬೆರಡೂ ಇಲ್ಲ.