ಆಚಾರವನನಾಚಾರವ ಮಾಡಿ ನುಡಿವರು.
ಅನಾಚಾರವನಾಚಾರವ ಮಾಡಿ ನುಡಿವರು.
ಸತ್ಯವನಸತ್ಯವ ಮಾಡಿ ನುಡಿವರು.
ಅಸತ್ಯವ ಸತ್ಯವ ಮಾಡಿ ನುಡಿವರು.
ವಿಷವ ಅಮೃತವೆಂಬರು. ಅಮೃತವ ವಿಷವೆಂಬರು.
ಸಹಜವನರಿಯದ ಅಸಹಜರಿಗೆ,
ಶಿವನೊಲಿಯೆಂದಡೆ ಎಂತೊಲಿವನಯ್ಯ?
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ,
ನೀ ಮಾಡಿದ ಮಾಯವ ನೋಡಿ, ನಾನು ಬೆರಗಾದೆನು.