Index   ವಚನ - 184    Search  
 
ನಿತ್ಯಾನಿತ್ಯವಿಚಾರವಿಡಿದು ನೋಡಿದಡೆ, ಭೂಮಿ ಜಲ ಅನಲ ಮರುತ ಆಕಾಶವೆಂಬ ಭೌತಿಕಂಗಳು ತಾನಲ್ಲವೆಂದರಿದು, ಕರಣೇಂದ್ರಿಯ ವಿಷಯಂಗಳ ಹೊತ್ತಾಡುವ ಜಡದೇಹ ಮೃತ್ತಿಕೆಯ ಪುತ್ಥಳಿಯಂತೆ ಇಹಕಾರಣ ಆ ದೇಹ ತಾನಲ್ಲವೆಂದರಿದು, ಭವಭೀತಿ ಆಮಯ ಅರಿಗಳಾರ ಕೂಡಿಹ ಜೀವನು ತಾನಲ್ಲವೆಂದರಿದು, ಇಹಪರವೆಂಬ ಇದ್ದೆಸೆಯ ಹೊದ್ದದೆ, ತನುಗುಣವಳಿದು ಮನೋವಿಕಾರ ಮಾಣ್ದು, ಮಾಯೋಪಾಧಿಕನಲ್ಲದ ನಿತ್ಯ ಸದೋದಿತ ಚಿದ್ಘನ ಪರಿಪೂರ್ಣ ಬೋಧಪ್ರಭು ಜಗದಾದಿಮೂರ್ತಿ, ವಾಙ್ಮನಕ್ಕಭೇದ್ಯ ಶಿವಾಂಶಿಕ ಪರಮಾತ್ಮ ತಾನೆಂದರಿದು, ಆ ಮಹಾಘನ ಶಿವಲಿಂಗದೊಳವಿರಳನಾಗಿ ಶಿವಜ್ಞಾನಾನುಭಾವದಿಂದ ಶಿವನೊಳಗೆ ಅನನ್ಯನುಭಾವಿಯಾಗಿಹಾತನೆ ಮುಕ್ತನಯ್ಯಾ, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರ.