Index   ವಚನ - 195    Search  
 
ಬೀಜದಿಂದ ಅಂಕುರ ತೋರಿದ ಬಳಿಕ ಬೀಜ ನಾಶವಪ್ಪುದು ನೋಡಯ್ಯ. ಪುಷ್ಪದಿಂದ ಫಲ ತೋರಿದ ಬಳಿಕ ಪುಷ್ಪ ನಾಶವಪ್ಪುದು ನೋಡಯ್ಯ. ಸತ್ಕರ್ಮದಿಂದ ತತ್ವ ವ್ಯಕ್ತವಾದ ಬಳಿಕ ಕರ್ಮ ನಾಶವಪ್ಪುದು ನೋಡಯ್ಯ. ಈ ಪರಿಯಿಂದ ಅಂಕುರ ಫಲದಂತೆ, ತಮ್ಮಲ್ಲಿ ತನ್ಮಯವಾಗಿರ್ದ ತತ್ವವ ತಾವರಿಯದೆ, ಹಲವು ಶಾಸ್ತ್ರವನೋದಿ ತಿಳಿವಿಲ್ಲದ ಮೂಢರೆಲ್ಲ ಹೊಲಬುಗೆಟ್ಟು ಹೋದರಲ್ಲ. ಅದೆಂತೆಂದಡೆ: ಗೋಪ ಕಕ್ಷೆಯಲ್ಲಿ ಛಾಗದ ಮರಿಯನಿಟ್ಟು ಮರಿಯ ಕಾಣೆನೆಂದು ಬಾವಿಯ ನಿಲಿಕಿ ನೋಡೆ ಬಾವಿಯ ನೀರೊಳಗೆ ಮರಿಯ ಬಿಂಬವ ಕಂಡು ಬಾವಿಯ ಬೀಳುವ ಗೋಪನಂತೆ, ಉಭಯಕುಚ ಮಧ್ಯ ಕೋಟರದಲ್ಲಿ ನಿದ್ರೆಗೆಯ್ವುತಿರ್ದ ಸುತನ ಮರೆದು, ಸುತನ ಕಾಣೆನೆಂದು ರೋದನವ ಮಾಡುವ ಮೂಢ ಸ್ತ್ರೀಯಂತೆ, ತಮ್ಮಲ್ಲಿದ್ದ ನಿಜತತ್ವವ ತಾವರಿಯದವರು ಆತ್ಮಾರ್ಥವಾಗಿ ಕೆಟ್ಟು ವ್ಯರ್ಥರಾದರೆಲ್ಲಾ, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರ.