ಶಿರ ಮುಖ ಹೃದಯ ಪಾದ ಬಾಹುಗಳೆಲ್ಲ
ಶಿವನ ಅವಯವಂಗಳಾದವು.
ಶ್ರೋತ್ರ ತ್ವಕ್ ನೇತ್ರ ಜಿಹ್ವೆ ಘ್ರಾಣವೆಂಬವೆಲ್ಲ
ಶಿವನ ಇಂದ್ರಿಯಂಗಳಾದವು.
ಮನ ಬುದ್ಧಿ ಚಿತ್ತ ಅಹಂಕಾರಗಳೆಲ್ಲಾ ಶಿವನ ಕರಣಂಗಳಾದವು.
ಪ್ರಾಣ ಅಪಾನ ವ್ಯಾನ ಉದಾನ ಸಮಾನ ಎಂಬವುಗಳಲ್ಲಿ
ಶಿವನ ಚೈತನ್ಯವಿದ್ದುದಾಗಿ ಒಳಗಿದ್ದ ಚೇತನವು ನೀವೇ.
ಒಳಗೆ ನೀವು, ಹೊರಗೆ ನೀವು: ನಾನೆಂಬುದಿಲ್ಲ.
ನಾನೇನ ಮಾಡಿತ್ತೆಲ್ಲಾ ನಿಮ್ಮ ವಿನೋದ.
ಎನ್ನ ಸರ್ವ ಭೋಗವೆಲ್ಲ ನಿಮ್ಮ ಭೋಗವಯ್ಯ.
ಕರ್ತೃತ್ವ ನಿಮ್ಮದಾಗಿ, ಎನಗೆ ಕರ್ತೃತ್ವವಿಲ್ಲ.
ನಾ ನಿಮ್ಮೊಳಗು,
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರ.