Index   ವಚನ - 242    Search  
 
ಪ್ರಸಾದವನು ಪ್ರಸಾದಿಯನು ಪದಾರ್ಥದ ಭೇದವನು ಅರಿವುದರಿದು ನೋಡಾ. ಮುನ್ನಾದಿಯ ಪ್ರಸಾದವು ಅರ್ಪಣಕ್ಕೆ ಬಂದಲ್ಲಿ ಉಪಚಾರದಿಂದ ಪದಾರ್ಥವೆನಿಸಿತ್ತು. ಅರ್ಪಣದ ಮೇಲೆ ಪ್ರಸಾದವೆನಿಸಿತ್ತು. ಈ ಪ್ರಸಾದದಾದಿ ಕುಳವ ಬಲ್ಲಡೆ, ಆತ ಪ್ರಸಾದಿ. ಪ್ರಸಾದಿಯ ಬಿಟ್ಟು ಪ್ರಸಾದವಿಲ್ಲ, ಪ್ರಸಾದ ಬಿಟ್ಟು ಪ್ರಸಾದಿಯಿಲ್ಲ. ಪ್ರಸಾದವೂ ಪ್ರಸಾದಿಯೂ ಕೂಡಿ ಸೋಂಕದ ಪದಾರ್ಥವಿಲ್ಲ. ಇದು ಕಾರಣ, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನ ಪ್ರಸಾದಿಯ ಪ್ರಸಾದದಿಂದ, ಮೂರು ಲೋಕವೆಲ್ಲಾ ಜೀವಿಸಿತ್ತಾಗಿ, ಅಂತಪ್ಪ ಪ್ರಸಾದಿಗೆ ನಮೋ ನಮೋ ಎನುತ್ತಿರ್ದೆನು.