ಆರಾರದ ನಿಚ್ಚಣಿಗೆಯನೇರಿ ನೋಡಲು
ಸೂಕ್ಷ್ಮ ಮಂದರಗಿರಿಯೆಂಬ ಮಹಾಪರ್ವತವ ಕಾಣಬಹುದು.
ಆ ಪರ್ವತವ ತುಟ್ಟ ತುದಿಯನೇರಿ ನೋಡಲು
ಮಹದಾಕಾಶ ಮಂಟಪವುಂಟು.
ಆ ಮಂಟಪವ ಹೊಕ್ಕಿಹೆನೆಂದು ವಿಚಾರಿಸಿ ನೋಡಲು
ಅಲ್ಲೊಂದು ಸೂಕ್ಷ್ಮದ್ವಾರವುಂಟು.
ಆ ಸೂಕ್ಷ್ಮದ್ವಾರ ಕವಾಟವ ತೆರೆದು ನೋಡಲು
ಅಲ್ಲಿ ನಿರುಪಾಧಿಕ ಜ್ಯೋತಿ ಬೆಳಗುತ್ತಿಪ್ಪುದು.
ಆ ಬೆಳಗಿನೊಳಗೆ ಅಚಲವಾಗಿ ನಿಂದು,
ಪರಿಪೂರ್ಣ ಪೂಜೆಯಾಗಿ
ತನ್ನನೆ ನಿರಾಳಲಿಂಗಕ್ಕೆ ಪೂಜೆ ಮಾಡುವಾತನೆ
ಪರಮ ನಿರ್ವಾಣಿಯಯ್ಯಾ,
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರ.