Index   ವಚನ - 430    Search  
 
ನೀರು ನೀರ ಕೂಡಿ, ಕ್ಷೀರ ಕ್ಷೀರವ ಕೂಡಿ, ಅಗ್ನಿ ಅಗ್ನಿಯ ಕೂಡಿದಂತೆ. ತನ್ನೊಳಗೆ ಶಿವನು, ಶಿವನೊಳಗೆ ತಾನು ಅಡಗಿ ಏಕವಾದ ಮತ್ತೆ, ತಾ ಶಿವನಾದೆನೆಂಬ ಅಹಂಭಾವವಿಲ್ಲ ನೋಡಯ್ಯ. ಸರ್ವಾತ್ಮರೆಂಬ ಪರತತ್ವ ತಾನಾದ ಮತ್ತೆ, ಭೇದಾಭೇದ ಶಂಕೆಯೆಂಬುದು ಏನೂ ಇಲ್ಲ ನೋಡಯ್ಯ. ನಿತ್ಯ ನಿರ್ವಿಕಾರ ನಿಸ್ಸೀಮ ವ್ಯೋಮಾತೀತ ನಿರ್ವಿಕಲ್ಪ ನಿಜ ತಾನಾದ ಮತ್ತೆ, ಭೂಮ್ಯಾದಿ ಭೂತ ಗ್ರಹ ನಕ್ಷತ್ರ ದೇವ ಮನುಷ್ಯ ತಿರ್ಯಗ್ಜಾತಿಗಳೆಂಬವೇನೂ ಇಲ್ಲ ನೋಡಾ. ಸತ್ತು ಚಿತ್ತು ಆನಂದಲಕ್ಷಣವಿದೆಂಬ ಜ್ಞಾನಶೂನ್ಯವಾಗಿ ಶಬ್ದಮುಗ್ಧವಾದ ಮತ್ತೆ ಪರಬ್ರಹ್ಮಅಪರಬ್ರಹ್ಮವೆಂಬ ನಾಮವು ಇಲ್ಲ. ತಾನಲ್ಲದೆ ಮತ್ತೇನೂ ಇಲ್ಲ ನೋಡಾ. ``ಜಲೇ ಜಲಮಿವ ನ್ಯಸ್ತಂ ವಹ್ನೌ ವಹ್ನಿರಿವಾರ್ಪಿತಃ ಪರಬ್ರಹ್ಮಣಿ ಲೀನಾತ್ಮನ ವಿಭಾಗೇನ ದೃಶ್ಯತೇ' ಇಂತೆಂದುದಾಗಿ, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನಲ್ಲಿ ಒಂದಾದ ಲಿಂಗೈಕ್ಯನಿರವು.