Index   ವಚನ - 431    Search  
 
ಆರು ನೆಲೆ ಮಂಟಪದ ಕೋಣೆಯಲ್ಲಿ ಆರು ಜ್ಯೋತಿಯ ಮುಟ್ಟಿಸಿ ಆ ಜ್ಯೋತಿಯ ಬೆಳಗಿನಲ್ಲಿ ಆರು ಲಿಂಗವ ನಿರ್ಮಿಸಿ ಆರು ಲಿಂಗದ ಪ್ರತುಮೆಯಲ್ಲಿ ಆರು ಹಂತದ ಸೋಪಾನದಲ್ಲಿ ಮಹಾ ನಿರ್ಮಳವೆಂಬ ದುರ್ಗಮಂ ನಿರ್ಮಿಸಿ ಆ ದುರ್ಗದಲ್ಲಿ ಅರಸಂಗೆ ಕಾಲಿಲ್ಲದಾಕೆಯ ಮದುವೆಯ ಮಾಡಿ ತೂತಿಲ್ಲದ ಭೋಗಕ್ಕೆ ಕೂಡಿ ಬಿಂದುವಿಲ್ಲದೆ ಮಕ್ಕಳಾದ ಪರಿಯ ನೋಡಾ. ತೊಟ್ಟಿಲಿಲ್ಲದೆ ಹಾಸಿ ಮಲಗಿಸಿ ನಿದ್ರೆಗೆಯ್ಸಿದ ಶರಣನಾಚರಣೆಯನೆಂತೆಂಬೆನು. ಇದ ಕಂಡು ನಡೆಯಲರಿಯದೆ, ತಮ್ಮ ಮನ ಬಂದಂತೆ ನಡೆವರು. ಶಿವಯೋಗಕ್ಕೆ ದೂರವಾದರು ನೋಡಾ. ಹೊನ್ನ ಕಟ್ಟಿ ವಿರಕ್ತನು ಭಿಕ್ಷೆಯೆನಲಾಗದು. ಭಕ್ತನ ಗೃಹವೆಂದು ಜಂಗಮವು ಹೋದಲ್ಲಿ ಆ ಭಕ್ತನು ಎದ್ದು ನಮಸ್ಕರಿಸಿ ತನ್ನಲ್ಲಿರ್ದ ಪದಾರ್ಥವಂ ತಾನು ಸಹವಾಗಿ ಶಿವಾರ್ಪಣವ ಮಾಡ[ಬ]ಹುದಲ್ಲದೆ. ಇದಲ್ಲದೆ, ಜಂಗಮವ ಬೇರೆ ಕುಳ್ಳಿರಿಸಿ ಉಂಡನಾದರೆ ಅವನಿಗೆ ದೀಕ್ಷೆಯ ಕೊಟ್ಟ ಗುರುವಿಗೆ ತನ್ನ ಮಾರ್ಗವ ಬಿಟ್ಟು ಶಿವಭಕ್ತನಾದರೆ ಮೋಕ್ಷವಿಲ್ಲವಾಗಿ. ಕೋಳಿ ಒಂದು ಕುಟುಕ ಕಂಡರೆ ತನ್ನ ಮರಿಗೆ ತೋರದುಳಿವುದೆ? ಕಾಗೆ ಒಂದಗುಳ ಕಂಡರೆ ತನ್ನ ಬಳಗವ ಕರೆಯದುಳಿವುದೆ? ಶಿವಭಕ್ತನಾಗಿ ತನ್ನ ಲಿಂಗವ ಪೂಜಿಸಿ ಜಂಗಮವ ಮರೆದವನಾದರೆ ಸತ್ತ ದನವಿಗೆ ನರಿ ಹೋದಂತಾಯಿತ್ತು. ಆ ನರಿ ಹೋದ ನೆನಹಿನಲ್ಲಿ ನಾಯಿ ಹೋದಂತಾಯಿತ್ತು. ಇಷ್ಟಕ್ಕಿಂದ ಕರಕಷ್ಟವೆ ಶಿವಭಕ್ತರು? ಷಟ್ಚಕ್ರದ ಭಾವದಲ್ಲಿವೊಪ್ಪಿರುವ ಶಿವಶರಣರು ತಮ್ಮ ನಡೆ ನುಡಿಗಳ ಬಿಡದೆ ನಡೆವುದು. ಅದ ಕಂಡು ಕಣ್ದೆರೆದು ನೋಡಿದೆನಯ್ಯ. ಆವ ವರ್ತನೆಯಲ್ಲಿ ತಾನಿದ್ದರೇನು? ಆವ ಭಾವ ಹೇಂಗಿದ್ದರೇನು? ನಮ್ಮಾಚರಣೆ ನಮಗೆ ಶುದ್ಧ. ಗುರು ಕಲ್ಪಿತನಾದರು ಅವನು ಹಿಂದೆ ಸಂಬಂಧವಾದ ಕಾರಣ, ಅವನಿಗೆ ಬಂಧ ದೊರಕುವದಲ್ಲದೆ ನನಗೆ ದೊರಕದೆಂದು ತಾನು ನಿಶ್ಚೈಸಿದರೆ ತನಗೆ ದೊರಕಬಲ್ಲದೆ? ತಾನು ಪೂರ್ವದಲ್ಲಿ ತಾ ಪಡದುದು ತನಗೆ ತಪ್ಪುವದೆ? ಪ್ರಾಣಿಹಿಂಸೆಯ ಮಾಡುವಾತನಾದರೆಯು ಅವನಿಗೆ ಕಲ್ಪಿತವೇತಕ್ಕೆ? ಹಿಂದೆ ಅವನು ಶಿವನಪ್ಪಣೆವಿಡಿದು ಬಂದ ಕಾರಣ ಅವನಿಗೆ ಬಂದಿತಲ್ಲದೆ ಗಗನದ ಮಂಟಪದ ಮೇಲೆ ಊರ್ಧ್ವಮುಖದ ಗದ್ದುಗೆಯ ಮಾಡಿ ಮಹಾಪ್ರಕಾಶವೆಂಬ ಬೆಳಗಂ ತೋರಿ ಓಂಕಾರವೆಂಬ ಲಿಂಗವ ಮೂರ್ತಮಾಡಿಸಿ ಅದಕ್ಕೆ ಸದ್ಭಾವವೆಂಬ ಪುಷ್ಪವ ತಂದು ಜ್ಞಾನಪ್ರಕಾಶವೆಂಬ ಜ್ಯೋತಿಯಂ ಪೊತ್ತಿಸಿ ಸದ್ಭಕ್ತಿಯೆಂಬ ನೈವೇದ್ಯಮಂ ಮಾಡಿ ನಿರ್ಮಳವೆಂಬ ಪೂಜಾರಿಯಾಗಿರ್ಪನು. ಇದನರಿಯದೆ ತಮ್ಮ ಮನ ಬಂದಂತೆ ಇಪ್ಪವರ ಲಿಂಗಹೋದವನಾದರು ಅವನ ಕಣ್ಣಲ್ಲಿ ಕಂಡು ಅವನಷ್ಟಕ್ಕಲ್ಲದೆ ಅನ್ಯರ ಗೃಹವ ಬಿಡಲೇತಕ್ಕೆ? ಪಾಪವ ಮಾಡಿದನಾದರು ಅವನ ಗೃಹಕ್ಕಲ್ಲದೆ ಅವನೊಂದಿಗೆ ಬೆರಸಿದವನಾದರು ಅವನಿಗೆ ಪಾಪ ಸಂಭವಿಸುವುದುಂಟೇ? ಇದ ಸಂಕಲ್ಪವ ಮಾಡಿ ಬಿಡಲೇತಕ್ಕೆ? ಒರ್ವಾನೊಬ್ಬನು ಭವಿಯ ಒಡನಾಡಲು ಅವನ ಪಾಪವು ಅವನಲ್ಲಿಪ್ಪುದಲ್ಲದೆ ಮಿಕ್ಕಿನ ಗೃಹಕ್ಕೆ ಸಂಬಂಧವೇನು? `ಮಾಡಿದವರನಲ್ಲದೆ ಮಿಕ್ಕಿನವರ ಸಂಕಲ್ಪವ ಮಾಡಲಾಗದು'ಯೆಂಬುದು ಗುರುವಚನ. ಹೆಣ್ಣು ಬಿಂದು ಸಂಬಂಧವಾಗಲು ಆ ಭೋಗಕ್ಕೆ ಶರಣನು ಅದನು ಮನದಲ್ಲಿ ಕಂಡು ಸಂತೋಷವಾಗಿಪ್ಪ. ಇಂತೀ ಭಾವಶುದ್ಧವುಳ್ಳಾತನು ಮರ್ತ್ಯಲೋಕಕ್ಕೆ ಮರಳಿ ಬಾರನೆಂಬುದು. ಶರಣ ಸಕಲವಿದ್ಯವ ಕಲಿತು ಫಲವೇನು? ನಿಂದ್ಯನೆ ದೊರಕೊಂಡಮೇಲೆ? ಹುಣ್ಣು ಹುಗಳು ಕೋಷ್ಠವಾಗಿರಲು, ಅವರ ಕಂಡು ಜರಿಯಲಾರದೆಂಬುದೆನ್ನ ಭಾಷೆ. ಇಂದ್ರಿಯಸುಖಕ್ಕೆ ಹೋಗಿ ಬಿದ್ದು ಶಿವಮಾಡಿದರಾಯಿತ್ತೆಂಬ ಅವಿಚಾರದ ನುಡಿಯ ಕೇಳಲಾಗದು. ತನ್ನ ಮನವು ಶುದ್ಧವಾದ ಮೇಲೆ, ಸಕಲ ಸುಖಂಗಳು ತನಗುಂಟಲ್ಲದೆ, ಜ್ಞಾನಿಗೆ ಕತ್ತಲೆಯಿಲ್ಲ. ಅಜ್ಞಾನಿಗೆ ಪಾಪವಿಲ್ಲ. ಇದನರಿದು, ಮುಂದುಗೊಂಡು ತಿರುಗುವ, ಅಣ್ಣಗಳ ಕಂಡು, ನಗುತಿರ್ಪರು ನಿಮ್ಮ ಶರಣರು, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ.