ಎನ್ನಾಧಾರಚಕ್ರಸ್ಥಾನದಲ್ಲಿ
ಮೂರ್ತಿಗೊಂಡನಯ್ಯಾ ಬಸವಣ್ಣನು.
ಎನ್ನ ಸ್ವಾದಿಷ್ಠಾನಚಕ್ರಸ್ಥಾನದಲ್ಲಿ
ಮೂರ್ತಿಗೊಂಡನಯ್ಯಾ ಚೆನ್ನಬಸವಣ್ಣನು.
ಎನ್ನ ಮಣಿಪೂರಕಚಕ್ರಸ್ಥಾನದಲ್ಲಿ
ಮೂರ್ತಿಗೊಂಡನಯ್ಯಾ ಘಟ್ಟಿವಾಳ ಮದ್ದಯ್ಯನು.
ಎನ್ನ ಅನಾಹತಚಕ್ರಸ್ಥಾನದಲ್ಲಿ
ಮೂರ್ತಿಗೊಂಡನಯ್ಯಾ ಸಿದ್ಧರಾಮಯ್ಯನು.
ಎನ್ನ ವಿಶುದ್ಧಿಚಕ್ರಸ್ಥಾನದಲ್ಲಿ
ಮೂರ್ತಿಗೊಂಡನಯ್ಯಾ ಮರುಳಶಂಕರದೇವರು.
ಎನ್ನ ಆಜ್ಞಾಚಕ್ರಸ್ಥಾನದಲ್ಲಿ
ಮೂರ್ತಿಗೊಂಡನಯ್ಯಾ ಪ್ರಭುದೇವರು.
ಆಧಾರಕ್ಕಾಚಾರಲಿಂಗವಾದಾತ ಬಸವಣ್ಣ.
ಸ್ವಾಧಿಷ್ಠಾನಕ್ಕೆ ಗುರುಲಿಂಗವಾದಾತ ಚೆನ್ನಬಸವಣ್ಣ.
ಮಣಿಪೂರಕಕ್ಕೆ ಶಿವಲಿಂಗವಾದಾತ ಘಟ್ಟಿವಾಳ ಮದ್ದಯ್ಯ.
ಅನಾಹತಕ್ಕೆ ಜಂಗಮಲಿಂಗವಾದಾತ ಸಿದ್ಧರಾಮಯ್ಯ.
ವಿಶುದ್ಧಿಗೆ ಪ್ರಸಾದಲಿಂಗವಾದಾತ ಮರುಳಶಂಕರದೇವರು.
ಆಜ್ಞೆಗೆ ಮಹಾಲಿಂಗವಾದಾತ ಪ್ರಭುದೇವರು.
ನಿಃಕಳಂಕ ಕೂಡಲ [ಚೆನ್ನ]ಸಂಗಮದೇವಾ,
ನಿಮ್ಮ ಶರಣರ ಶ್ರೀಪಾದಕ್ಕೆ
ನಮೋ ನಮೋ ಎನುತಿರ್ದೆನು.
Art
Manuscript
Music
Courtesy:
Transliteration
Ennādhāracakrasthānadalli
mūrtigoṇḍanayyā basavaṇṇanu.
Enna svādiṣṭhānacakrasthānadalli
mūrtigoṇḍanayyā cennabasavaṇṇanu.
Enna maṇipūrakacakrasthānadalli
mūrtigoṇḍanayyā ghaṭṭivāḷa maddayyanu.
Enna anāhatacakrasthānadalli
mūrtigoṇḍanayyā sid'dharāmayyanu.
Enna viśud'dhicakrasthānadalli
mūrtigoṇḍanayyā maruḷaśaṅkaradēvaru.
Enna ājñācakrasthānadalli
mūrtigoṇḍanayyā prabhudēvaru.Ādhārakkācāraliṅgavādāta basavaṇṇa.
Svādhiṣṭhānakke guruliṅgavādāta cennabasavaṇṇa.
Maṇipūrakakke śivaliṅgavādāta ghaṭṭivāḷa maddayya.
Anāhatakke jaṅgamaliṅgavādāta sid'dharāmayya.
Viśud'dhige prasādaliṅgavādāta maruḷaśaṅkaradēvaru.
Ājñege mahāliṅgavādāta prabhudēvaru.
Niḥkaḷaṅka kūḍala [cenna]saṅgamadēvā,
nim'ma śaraṇara śrīpādakke
namō namō enutirdenu.