ಬಟ್ಟಬಯಲಲ್ಲಿ ಒಂದು ಮೃಗ ಹುಟ್ಟಿತ್ತು.
ಅದ ಕಂಡಿಹೆನೆಂದಡೆ ಕಾಣಬಾರದು,
ಹೇಳಿಹೆನೆಂದಡೆ ಹೇಳಬಾರದು;
ಅದು ಚಿದ್ರೂಪು, ಚಿನ್ಮಯವು.
ಅದು ಗೊತ್ತ ಮೆಟ್ಟಿ ಆಡುವುದನರಿಯದೆ,
ಕತ್ತಲೆಯಲ್ಲಿ ಮುಳುಗಿ ಕಾಮನ ಬಾಧೆಗೆ ಸಿಕ್ಕಿ,
ಎತ್ತಲೆಂದರಿಯದೆ ಭವಬಂಧನದಲ್ಲಿ ಮುಳುಗಿ
ಕಾಲನ ಬಾಧೆಗೊಳಗಾಗಿ,
ಸತ್ತು ಮೆಟ್ಟಿ ಹೂಣಿಸಿಕೊಂಬ ಮನುಜರು
ಮತ್ತೆ ಶಿವಶರಣರ ಕೂಡೆ ತತ್ವವ ಬಲ್ಲೆವೆಂದು ತರ್ಕಕ್ಕೆ ಬಹರು.
ಇದು ಹುಸಿ; ನಮ್ಮ ಶರಣರು ಇದ ಮೆಚ್ಚರು.
ತತ್ವವೆಂಬುದನೆ ಮೆಟ್ಟಿನಿಂದು ಮಿಥ್ಯವ ನುಡಿವರ
ತಮ್ಮ ಪುತ್ರರೆಂದು ಭಾವಿಸಿ,
ಸತ್ತು ಹುಟ್ಟುವರನೊತ್ತರಿಸಿ ನಿಶ್ಚಿಂತದಲ್ಲಿ ನಿಜವ ನೆಮ್ಮಿ,
ಬಟ್ಟಬಯಲೊಳಗಣ ಮೃಗದ ಗೊತ್ತ ಮೆಟ್ಟಿ,
ಬಚ್ಚಬರಿಯ ಬೆಳಗಿನೊಳಗೋಲಾಡುವ ಶರಣರ
ಈ ಸತ್ತು ಹುಟ್ಟಿ ಹೂಣಿಸಿಕೊಂಬ ಮಿಥ್ಯಾವಾದಿಗಳೆತ್ತ ಬಲ್ಲರು,
ನಿಮ್ಮ ನೆಲೆಯ ಅಪ್ಪಣ್ಣಪ್ರಿಯ ಚೆನ್ನಬಸವಣ್ಣಾ .
Art
Manuscript
Music
Courtesy:
Transliteration
Baṭṭabayalalli ondu mr̥ga huṭṭittu.
Ada kaṇḍ'̔ihenendaḍe kāṇabāradu,
hēḷihenendaḍe hēḷabāradu;
adu cidrūpu, cinmayavu.
Adu gotta meṭṭi āḍuvudanariyade,
kattaleyalli muḷugi kāmana bādhege sikki,
ettalendariyade bhavabandhanadalli muḷugi
kālana bādhegoḷagāgi,
sattu meṭṭi hūṇisikomba manujaru
Matte śivaśaraṇara kūḍe tatvava ballevendu tarkakke baharu.
Idu husi; nam'ma śaraṇaru ida meccaru.
Tatvavembudane meṭṭinindu mithyava nuḍivara
tam'ma putrarendu bhāvisi,
sattu huṭṭuvaranottarisi niścintadalli nijava nem'mi,
baṭṭabayaloḷagaṇa mr̥gada gotta meṭṭi,
baccabariya beḷaginoḷagōlāḍuva śaraṇara
ī sattu huṭṭi hūṇisikomba mithyāvādigaḷetta ballaru,
nim'ma neleya appaṇṇapriya cennabasavaṇṇā.