ಮರ್ತ್ಯದಲ್ಲಿ ಹುಟ್ಟಿ ಎತ್ತಲೆಂದರಿಯದೆ,
ಕತ್ತಲೆಯೊಳು ಮುಳುಗಿ,
ಕಾಮನ ಬಲೆಯೊಳಗೆ ಸಿಕ್ಕಿದ ಎಗ್ಗ ಮನುಜರಿರಾ,
ನೀವು ಕೇಳಿರೋ.ನಿಮ್ಮ ಇರವು ಎಂತೆಂದಡೆ:
ಕಾಯವೆಂದಡೆ ಕಳವಳಕ್ಕೊಳಗಾಯಿತ್ತು;
ಜೀವವೆಂದಡೆ ಅರುಹು ಮರವೆಗೊಳಗಾಯಿತ್ತು;
ಮನವೆಂದಡೆ ಸಚರಾಚರವನೆಲ್ಲವ
ಚರಿಸುವುದಕ್ಕೆ ಒಳಗಾಯಿತ್ತು;
ಪ್ರಾಣವೆಂದಡೆ ಇವೆಲ್ಲವನು ಆಡಿಸಿ
ನೋಡುವುದಕ್ಕೆ ಒಳಗಾಯಿತ್ತು.
ಇವರೊಳಗೆ ಬಿದ್ದು ಏಳಲಾರದ ಬುದ್ಧಿಹೀನರಿರಾ,
ನೀವು ಕೇಳಿ, ಹೇಳಿಹೆನು.
ನಮ್ಮ ಶರಣರು ಜಗದೊಳಗೆ ಹುಟ್ಟಿ ಜಗವನೆ ಮರೆದು,
ಎಚ್ಚತ್ತು ಚಿತ್ತವ ಸುಯಿದಾನವ ಮಾಡಿ,
ಕಳವಳಕ್ಕೊಳಗಾಗಿದ್ದ ಕಾಯವನೆ
ಸರ್ವಾಂಗಲಿಂಗವ ಮಾಡಿದರು.
ಅರುಹು ಮರವೆಯೊಳಗಾಗಿದ್ದ ಜೀವನ ಬುದ್ಧಿಯನೆ
ಪರಮನ ಬುದ್ಧಿಯ ಮಾಡಿದರು.
ಸಚರಾಚರವ ಚರಿಸುವುದಕ್ಕೊಳಗಾಗಿದ್ದ ಮನವನೆ
ಅರುಹು ಮಾಡಿದರು.
ಆಡಿಸಿ ನೋಡುವುದಕ್ಕೆ ಒಳಗಾಗಿದ್ದ ಪ್ರಾಣವನೆ
ಲಿಂಗವ ಮಾಡಿದರು.
ಈ ಸರ್ವಾಂಗವನು ಲಿಂಗವ ಮಾಡಿ
ಆ ಲಿಂಗವನು ಕಂಗಳಲ್ಲಿ ಹೆರೆಹಿಂಗದೆ ನೋಡಿ,
ಆ ಮಂಗಳದ ಮಹಾಬೆಳಗಿನಲ್ಲಿ ಬಯಲಾದರಯ್ಯಾ,
ಅಪ್ಪಣ್ಣಪ್ರಿಯ ಚೆನ್ನಬಸವಣ್ಣಾ.
Art
Manuscript
Music
Courtesy:
Transliteration
Martyadalli huṭṭi ettalendariyade,
kattaleyoḷu muḷugi,
kāmana baleyoḷage sikkida egga manujarirā,
nīvu kēḷirō.Nim'ma iravu entendaḍe:
Kāyavendaḍe kaḷavaḷakkoḷagāyittu;
jīvavendaḍe aruhu maravegoḷagāyittu;
manavendaḍe sacarācaravanellava
carisuvudakke oḷagāyittu;
prāṇavendaḍe ivellavanu āḍisi
nōḍuvudakke oḷagāyittu.
Ivaroḷage biddu ēḷalārada bud'dhihīnarirā,
nīvu kēḷi, hēḷihenu.
Nam'ma śaraṇaru jagadoḷage huṭṭi jagavane maredu,
eccattu cittava suyidānava māḍi,
kaḷavaḷakkoḷagāgidda kāyavane
Sarvāṅgaliṅgava māḍidaru.
Aruhu maraveyoḷagāgidda jīvana bud'dhiyane
paramana bud'dhiya māḍidaru.
Sacarācarava carisuvudakkoḷagāgidda manavane
aruhu māḍidaru.
Āḍisi nōḍuvudakke oḷagāgidda prāṇavane
liṅgava māḍidaru.
Ī sarvāṅgavanu liṅgava māḍi
ā liṅgavanu kaṅgaḷalli herehiṅgade nōḍi,
ā maṅgaḷada mahābeḷaginalli bayalādarayyā,
appaṇṇapriya cennabasavaṇṇā.