ಕಂಗಳ ಮುಂದಣ ಬೆಳಗ ಕಾಣದೆ,
ಕಂಡಕಂಡವರ ಹಿಂದೆ ಹರಿದು,
ಇನ್ನು ಬೇರೆ ಕಂಡೆನೆಂಬ ಭಂಗಿತರ ನೋಡಾ?
ತನ್ನಲ್ಲಿ ತಾ ಸುಯಿದಾನಿಯಾಗಿ ನೋಡಲರಿಯದೆ,
ಭಿನ್ನಗಣ್ಣಿಲಿ ನೋಡಿಹೆನೆಂದು ತಮ್ಮ ಮರೆದು
ಇನ್ನುಂಟೆಂದು ಅರಸುವ ಅಣ್ಣಗಳಿರಾ, ನೀವು ಕೇಳಿರೆ.
ಮನವು ಮಹದಲ್ಲಿ ನಿಂದುದೆ ಲಿಂಗ:
ಕರಣಂಗಳರತುದೆ ಕಂಗಳ ಮುಂದಣ ಬೆಳಗು.
ಇದನರಿಯದೆ, ಮುಂದೆ ಘನವುಂಟೆಂದು
ತೊಳಲಿ ಬಳಲಿ ಅರಸಿಹೆನೆಂದು
ಅರೆಮರುಳಾಗಿ ಹೋದರಯ್ಯಾ
ನಿಮ್ಮ ನೆಲೆಯನರಿಯದೆ
ಅಪ್ಪಣ್ಣಪ್ರಿಯ ಚೆನ್ನಬಸವಣ್ಣಾ.
Art
Manuscript
Music
Courtesy:
Transliteration
Kaṅgaḷa mundaṇa beḷaga kāṇade,
kaṇḍakaṇḍavara hinde haridu,
innu bēre kaṇḍenemba bhaṅgitara nōḍā?
Tannalli tā suyidāniyāgi nōḍalariyade,
bhinnagaṇṇili nōḍ'̔ihenendu tam'ma maredu
innuṇṭendu arasuva aṇṇagaḷirā, nīvu kēḷire.
Manavu mahadalli nindude liṅga:
Karaṇaṅgaḷaratude kaṅgaḷa mundaṇa beḷagu.
Idanariyade, munde ghanavuṇṭendu
toḷali baḷali arasihenendu
aremaruḷāgi hōdarayyā
nim'ma neleyanariyade
appaṇṇapriya cennabasavaṇṇā.