Index   ವಚನ - 34    Search  
 
ಮೂಲಪ್ರಣವವನರಿದು ಮೂಲಮಂತ್ರದೊಳಗಾಡುತ್ತ, ಮುಂದನರಿದು, ಹಿಂದ ಹರಿದು, ಸಂದು ಸಂಶಯವಿಲ್ಲದೆ, ಸ್ವಯವ ನೋಡುತ್ತ, ಪರವ ಕೂಡುತ್ತ, ಶಬ್ದವ ಕೇಳುತ್ತ, ನಿರ್ಧರವಾಗಿ ನಿರ್ಬುದ್ಧಿಯಲ್ಲಿ ನಿರಾಳವನೊಡಗೂಡಿ, ನಿಜದಲ್ಲಿ ಆನಂದಾಮೃತವ ಆರೋಗಣೆಯ ಮಾಡುವ ಪರಿಯೆಂತೆಂದಡೆ: ಬೇಯದ ಬೆಂಕಿಯಲಿ ಬೆಂದು, ಕಾಯದ ಅಗ್ಗವಣಿಯಲಿ ಅಡಿಗೆಯ ಮಾಡಿ, ಕಂದಲೊಡೆದು ಒಂದಾಗಿ ಉಂಡು, ಮಂಡೆಯಲ್ಲಿ ನಿಂದು, ಮಡದಿಯ ಸಂಗವ ಮಾಡಿ, ಮಾರುತನ ನಿಲಿಸಿ, ಮದನನ ಮರ್ದಿಸಿ, ನಿರ್ಧರವಾಗಿ ನಿಂದ ಶರಣ ಅಪ್ಪಣ್ಣಪ್ರಿಯ ಚೆನ್ನಬಸವಣ್ಣ ತಾನೆ ನೋಡಾ.