Index   ವಚನ - 35    Search  
 
ಮಾಯದ ಬೊಂಬೆಯ ಮಾಡಿ, ಕಂಗಳಿಗೆ ಕಾಮನ ಬಾಣವ ಹೂಡಿ, ನಡೆ ನುಡಿಯೊಳಗೆ ರಂಜಕದ ತೊಡಿಗೆಯನೆ ತೊಡಿಸಿ, ಮುಂದುಗಾಣಿಸದೆ, ಹಿಂದನರಸದೆ, ಲಿಂಗವ ಮರೆಹಿಸಿ, ಜಂಗಮವ ತೊರೆಯಿಸಿ, ಸಂದೇಹದಲ್ಲಿ ಸತ್ತು ಹುಟ್ಟುವ ಈ ಭವಬಂಧನಿಗಳೆತ್ತ ಬಲ್ಲರೋ ಈ ಶರಣರ ನೆಲೆಯ? ಅವರ ನೆಲೆ ತಾನೆಂತೆಂದಡೆ: ಹಿಂದನರಿದು, ಮುಂದೆ ಲಿಂಗದಲ್ಲಿ ಬೆರೆವ ಭೇದವ ಕಂಡು, ಜಗದ ಜಂಗುಳಿಗಳ ಹಿಂಗಿ, ಕಂಗಳ ಕರುಳನೆ ಕೊಯ್ದು, ಮನದ ತಿರುಳನೆ ಹರಿದು, ಅಂಗಲಿಂಗವೆಂಬುಭಯವಳಿದು, ಸರ್ವಾಂಗಲಿಂಗವಾಗಿ, ಮಂಗಳದ ಮಹಾಬೆಳಗಿನಲ್ಲಿ ಓಲಾಡುವ ಶರಣರ ನೆಲೆಯ ಜಗದ ಜಂಗುಳಿಗಳೆತ್ತ ಬಲ್ಲರು ಅಪ್ಪಣ್ಣಪ್ರಿಯ ಚೆನ್ನಬಸವಣ್ಣಾ.