ಅಯ್ಯಾ, ನಾನು ಊರ ಮರೆದು ಆಡ ಹೋದಡೆ,
ಒಕ್ಕಲು ಹೆಚ್ಚಿ ಸೊಕ್ಕಾಟ ಘನವಾಯಿತ್ತು.
ಇದ ಕಂಡು ಊರ ಹೊಕ್ಕೆ,
ಸ್ಥಾನದಲ್ಲಿ ನಿಂದೆ, ಒಂಬತ್ತು ಬಾಗಿಲ ಕದವನಿಕ್ಕಿದೆ.
ಆ ಜ್ಞಾನಾಗ್ನಿಯ ಹೊತ್ತಿಸಲು,
ಉರಿ ಎದ್ದಿತ್ತು, ಉಷ್ಣ ಊರ್ಧ್ವಕ್ಕೇರಿತ್ತು.
ತಲೆಯೆತ್ತಿ ನೋಡಲು,
ಒಕ್ಕಲು ಓಡಿತ್ತು, ಊರು ಬಯಲಾಯಿತ್ತು.
ಆ ಬಯಲನೆ ನೋಡಿ, ನಿರಾಳದೊಳಗಾಡಿ
ಮಹಾಬೆಳಗನೆ ಕೂಡಿ, ಸುಖಿಯಾದರಯ್ಯಾ
ನಮ್ಮ ಅಪ್ಪಣ್ಣಪ್ರಿಯ ಚೆನ್ನಬಸವಣ್ಣನ ಶರಣರು.