ಅಯ್ಯಾ, ಏನೂ ಇಲ್ಲದ ಬಯಲ ದೇಹಕ್ಕೆ
ತಾಮಸವ ಮುಂದುಮಾಡಿ, ಹೀಗೆ ಕೆಟ್ಟಿತ್ತಲ್ಲಾ ಜಗವೆಲ್ಲ.
ಅದೇನು ಕಾರಣವೆಂದಡೆ,
ಸುಖದ ಮುಖ ಕಂಡಿತ್ತು; ಜಗದ ರಚನೆಯ ನೋಡಿತ್ತು
ಇಚ್ಫೆಯ ಮೆಚ್ಚಿತ್ತು; ಮನವ ನಿಶ್ಚಯವ ಮಾಡದು.
ಅಂಗಸುಖವ ಬಯಸಿತ್ತು;
ಕಂಗಳ ಕಾಮವನೆ ಮುಂದುಮಾಡಿತ್ತು;
ಇದರಿಂದ ಲಿಂಗವ ಮರೆಯಿತ್ತು;
ಜಂಗಮವ ತೊರೆಯಿತ್ತು.
ಇದು ಕಾರಣದಿಂದ ಜಗದ ಮನುಜರು
ಭವಬಂಧನಕ್ಕೊಳಗಾದರು.
ಇವೆಲ್ಲವನು ಹಿಂಗಿಸಿ,
ನಮ್ಮ ಶಿವಶರಣರು ಲಿಂಗದಲ್ಲಿಯೆ ಬೆರೆದರು.
ಜಂಗಮಪ್ರಾಣವೆಂದು ಪಾದೋದಕ ಪ್ರಸಾದವ ಕೊಂಡು,
ನಮ್ಮ ಅಪ್ಪಣ್ಣಪ್ರಿಯ ಚೆನ್ನಬಸವಣ್ಣನ ಶರಣರು.