Index   ವಚನ - 42    Search  
 
ಆಗದಾಗದು ಮರ್ತ್ಯದ ಮನುಜರಿಗೆ ಶಿವಸುಖ? ಕಾಳುವಿಷಯದಲ್ಲಿ ಬಿದ್ದು ನುಡಿವುತ್ತ ಮರೆವೆ, ನಡೆವುತ್ತ ಮರೆವೆ, ಮೆಟ್ಟುತ್ತ ಮರೆವೆ, ಕೇಳುತ್ತ ಮರೆವೆ, ನೋಡುತ್ತ ಮರೆವೆ. ಇಂತು ಮರೆಹಿನೊಳಗಿದ್ದು ಅರುಹ ಕಂಡೆಹೆವೆಂಬ ಅಣ್ಣಗಳಿರಾ, ನೀವು ಕೇಳಿರೊ. ನಮ್ಮ ಶರಣರ ನಡೆ ಎಂತೆಂದಡೆ; ಐದು ಗುಣವನೆ ಅಳಿದು, ಐದು ಹಿಡಿದು, ನುಡಿವುತ್ತ ಲಿಂಗವಾಗಿ ನುಡಿವರು, ನಡೆವುತ್ತ ಲಿಂಗವಾಗಿ ನಡೆವರು, ಮುಟ್ಟುತ್ತ ಲಿಂಗವಾಗಿ ಮುಟ್ಟುವರು, ಕೇಳುತ್ತ ಲಿಂಗವಾಗಿ ಕೇಳುವರು, ನೋಡುತ್ತ ಲಿಂಗವಾಗಿ ನೋಡುವರು, ಸರ್ವಾಂಗವು ಲಿಂಗವಾಗಿ ಅಂಗಲಿಂಗವೆಂಬ ಉಭಯವಳಿದು, ಮಂಗಳದ ಮಹಾಬೆಳಗಿನಲ್ಲಿ ಲಿಂಗವೆ ಗೂಡಾಗಿದ್ದ ಕಾರಣ ಅಪ್ಪಣ್ಣಪ್ರಿಯ ಚೆನ್ನಬಸವಣ್ಣಾ.