ಹುಟ್ಟಿದ ಮನುಜರೆಲ್ಲಾ ಬಂದ ಬಟ್ಟೆಯ ನೋಡಿ
ಭ್ರಮೆಗೊಂಡು ಬಳಲುತ್ತೈದಾರೆ.
ಇದನರಿದು ಬಂದ ಬಟ್ಟೆಯ ಮೆಚ್ಚಿ,
ಕಾಣದ ಹಾದಿಯ ಕಂಡು,
ಹೋಗದ ಹಾದಿಯ ಹೋಗುತ್ತಿರಲು,
ಕಾಲ ಕಾಮಾದಿಗಳು ಬಂದು ಮುಂದೆ ನಿಂದರು.
ಅಷ್ಟಮದಂಗಳು ಬಂದು ಅಡ್ಡಗಟ್ಟಿದವು.
ದಶವಾಯು ಬಂದು ಮುಸುಕುತ್ತಿವೆ.
ಸಪ್ತವ್ಯಸನ ಬಂದು ಒತ್ತರಿಸುತಿವೆ.
ಷಡುವರ್ಗ ಬಂದು ಸಮರಸವ ಮಾಡುತ್ತಿವೆ.
ಕರಣಂಗಳು ಬೆಂದು ಉರಿವುತ್ತಿವೆ.
ಮರೆವೆ ಎಂಬ ಮಾಯೆ ಬಂದು ಕಾಡುತೀವಳೆ.
ತೋರುವ ತೋರಿಕೆಯೆಲ್ಲವೂ ಸುತ್ತ ಮೊತ್ತವಾಗಿವೆ.
ಇವ ಕಂಡು ಅಂಜಿ ಅಳುಕಿ
ಅಂಜನದಿಂದ ನೋಡುತ್ತಿರಲು
ತನ್ನಿಂದ ತಾನಾದೆನೆಂಬ ಬಿನ್ನಾಣವ ತಿಳಿದು,
ಮುನ್ನೇತರಿಂದಲಾಯಿತು,
ಆಗದಂತೆ ಆಯಿತೆಂಬ ಆದಿಯನರಿದು,
ಹಾದಿಯ ಹತ್ತಿ ಹೋಗಿ
ಕಾಲ ಕಾಮಾದಿಗಳ ಕಡಿದು ಖಂಡಿಸಿ,
ಅಷ್ಟಮದಂಗಳ ಹಿಟ್ಟುಗುಟ್ಟಿ,
ದಶವಾಯುಗಳ ಹೆಸರುಗೆಡಿಸಿ,
ಸಪ್ತವ್ಯಸನವ ತೊತ್ತಳದುಳಿದು,
ಷಡ್ವರ್ಗವ ಸಂಹರಿಸಿ,ಕರಣಂಗಳ ಸುಟ್ಟುರುಹಿ,
ಮರವೆಯೆಂಬ ಮಾಯೆಯ ಮರ್ಧಿಸಿ,
ನಿರ್ಧರವಾಗಿ ನಿಂದು ಸುತ್ತ ಮೊತ್ತವಾಗಿರುವವನೆಲ್ಲ
ಕಿತ್ತು ಕೆದರಿ,ಮನ ಬತ್ತಲೆಯಾಗಿ, ಭಾವವಳಿದು
ನಿರ್ಭಾವದಲ್ಲಿ ಆಡುವ ಶರಣ,
ಅಪ್ಪಣ್ಣಪ್ರಿಯ ಚೆನ್ನಬಸವಣ್ಣ ತಾನೆ ನೋಡಾ.