Index   ವಚನ - 63    Search  
 
ಹೊಸ್ತಿಲೊಳಗಿರಿಸಿದ ಜ್ಯೋತಿಯಂತೆ ಒಳಗೆ ನೋಡುವನು ತಾನೆ, ಹೊರಗೆ ನೋಡುವನು ತಾನೆ. ಅರಿದೆನೆಂಬುವನು ತಾನೆ, ಮರೆದೆನೆಂಬುವನು ತಾನೆ. ಕಂಡೆನೆಂಬವನು ತಾನೆ, ಕಾಣೆನೆಂಬವನು ತಾನೆ. ದೃಷ್ಟ ದೃಕ್ಕು ದೃಶ್ಯವೆಂಬ ತ್ರಿಪುಟಿ ಭೇದವ ಮೀರಿ. ತ್ರಿಕೂಟವನೇರಿ, ಅತ್ತಲೆ ನೋಡುತ್ತಿರಲು, ಹಿತ್ತಲ ಕದವ ತೆರೆದು ಮತ್ತವಾಗಿ ಎತ್ತಲೆಂದರಿಯದೆ, ಸತ್ತು ಚಿತ್ತಾನಂದದಲ್ಲಿ ಆಡುವ ಶರಣನ ಇರವೆಂತೆಂದಡೆ: ಬಿತ್ತಲಿಲ್ಲ ಬೆಳೆಯಲಿಲ್ಲ; ಒಕ್ಕಲಿಲ್ಲ ತೂರಲಿಲ್ಲ. ಇವನೆಲ್ಲಾ ಇಕ್ಕಲಿಸಿ ನಿಂದು ಮಿಕ್ಕು ಮೀರಿ ಕುಕ್ಕುಂಭೆ ಮೇಲೆ ಕುಳಿತುಕೊಂಡು ನೋಡುತ್ತಿರಲು, ಹಡಗೊಡೆಯಿತ್ತು; ಒಡವೆ ವಸ್ತು, ಮಡದಿ ಮಕ್ಕಳು ನೀರೊಳಗೆ ನೆರೆದು ಹೋಯಿತ್ತು. ಒಡನೆ ತಂಗಾಳಿ ಬಂದು ಬೀಸಲು, ತಂಪಿನೊಳಗೆ ನಿಂದು, ಗುಂಪು ಬಯಲಾಗಿ ಗೂಢವಾಗಿ ಆಡುವ ಶರಣ, ಅಪ್ಪಣ್ಣಪ್ರಿಯ ಚೆನ್ನಬಸವಣ್ಣ ತಾನೆ ನೋಡಾ.