Index   ವಚನ - 65    Search  
 
ಅಯ್ಯಾ, ನಾ ಹುಟ್ಟುವಾಗ ಬಟ್ಟಬಯಲೆ ಗಟ್ಟಿಯಾಯಿತ್ತು. ಆ ಬಟ್ಟಬಯಲು ಗಟ್ಟಿಯಾದ ಬಳಿಯಲ್ಲಿ ನಾ ಜನನವಾದೆ. ಜನನವಾದವರಿಗೆ ಮರಣ ತಪ್ಪದು. ಅದೇನು ಕಾರಣವೆಂದಡೆ; ಮರವೆ ಮರವೆಗೆ ಮುಂದುಮಾಡಿತ್ತು; ಕರ್ಮಕ್ಕೆ ಗುರಿಮಾಡಿತ್ತು; ಕತ್ತಲೆಯಲ್ಲಿ ಮುಳುಗಿಸಿತ್ತು. ಕಣ್ಣು ಕಾಣದೆ ಅಂಧಕನಂತೆ ತಿರುಗುವುದ ನೋಡಿ, ನಾ ಹೆದರಿಕೊಂಡು ಎಚ್ಚತ್ತು ಚಿತ್ತವ ಸುಯಿದಾನವ ಮಾಡಿ, ನಿಶ್ಚಿಂತವಾಗಿ ನಿಜವ ನೆಮ್ಮಿ ಅರುಹ ಕಂಡೆ. ಅರುಹುವಿಡಿದು ಆಚಾರವ ಕಂಡೆ; ಆಚಾರವಿಡಿದು ಗುರುವ ಕಂಡೆ; ಗುರುವಿಡಿದು ಲಿಂಗವ ಕಂಡೆ; ಲಿಂಗವಿಡಿದು ಜಂಗಮವ ಕಂಡೆ; ಜಂಗಮವಿಡಿದು ಪಾದೋದಕ ಪ್ರಸಾದವ ಕಂಡೆ. ಪಾದೋದಕ ಪ್ರಸಾದವಿಡಿದು ಮಹಾಶರಣನ ಕಂಡೆ. ಆ ಮಹಾಶರಣನ ಪಾದವಿಡಿದು ಎನ್ನ ಕಾಯಗುಣವಳಿಯಿತ್ತು; ಕರಣ ಗುಣ ಸುಟ್ಟಿತ್ತು; ಅಂಗಗುಣ ಅಳಿಯಿತ್ತು ಲಿಂಗ ಗುಣ ನಿಂದಿತ್ತು; ಭಾವ ಬಯಲಾಯಿತ್ತು ಬಯಕೆ ಸವೆಯಿತ್ತು. ಮಹಾದೇವನಾದ ಶರಣನ ಬರಿಯ ಬೆಳಗಲ್ಲದೆ, ಕತ್ತಲೆ ಕಾಣಬಾರದು ಕಾಣಾ ಅಪ್ಪಣ್ಣಪ್ರಿಯ ಚೆನ್ನಬಸವಣ್ಣಾ.