ಏನೇನು ಇಲ್ಲದಾಗ ನೀವಿಲ್ಲದಿದ್ದಡೆ
ನಾನಾಗಬಲ್ಲೆನೆ ಅಯ್ಯಾ?
ಆದಿ ಅನಾದಿ ಇಲ್ಲದಂದು ನೀವಿಲ್ಲದಿದ್ದಡೆ
ನಾನಾಗಬಲ್ಲೆನೆ ಅಯ್ಯ?
ಮುಳುಗಿ ಹೋದವಳ ತೆಗೆದುಕೊಂಡು,
ನಿಮ್ಮ ತೊತ್ತಿನ ತೊತ್ತಿನ ಪಡಿದೊತ್ತಿನ ಮಗಳೆಂದು
ರಕ್ಷಣೆಯ ಮಾಡಿದ ಶಿಶುವಾದ ಕಾರಣ
ಹಡದಪ್ಪಣ್ಣನೆ ಎನ್ನ ಕರಸ್ಥಲಕ್ಕೆ
ಲಿಂಗವಾಗಿ ಬಂದು ನೆಲೆಗೊಂಡನು.
ಚೆನ್ನಮಲ್ಲೇಶ್ವರನೆ ಎನ್ನ ಮನಸ್ಥಲಕ್ಕೆ
ಪ್ರಾಣವಾಗಿ ಬಂದು ಮೂರ್ತಗೊಂಡನು.
ಆ ಕರಸ್ಥಲದ ಲಿಂಗವನರ್ಚಿಸಿ ಪೂಜಿಸಿ
ವರವ ಬೇಡಿದಡೆ ತನುವ ತೋರಿದನು;
ಆ ತನುವಿಡಿದು ಮಹಾಘನವ ಕಂಡೆ;
ಆ ಘನವಿಡಿದು ಮನವ ನಿಲಿಸಿದೆ.
ಮನವ ನಿಲಿಸಿ ನೋಡುವನ್ನಕ್ಕ
ಪ್ರಾಣದ ನೆಲೆಯನರಿದೆ ಪ್ರಣವವನೊಂದುಗೂಡಿದೆ.
ಕಾಣಬಾರದ ಕದಳಿಯನೆ ಹೊಕ್ಕು
ನೂನ ಕದಳಿಯ ದಾಂಟಿದೆ; ಜ್ಞಾನಜ್ಯೋತಿಯ ಕಂಡೆ.
ತಾನು ತಾನಾಗಿಪ್ಪ ಮಹಾಬೆಳಗಿನಲ್ಲಿ ಓಲಾಡಿ ಸುಖಿಯಾದೆನಯ್ಯಾ,
ಚೆನ್ನಮಲ್ಲೇಶ್ವರನ ಕರುಣದ ಶಿಶುವಾದ ಕಾರಣದಿಂದ
ಅಪ್ಪಣ್ಣಪ್ರಿಯ ಚೆನ್ನಬಸವಣ್ಣ.
Art
Manuscript
Music
Courtesy:
Transliteration
Ēnēnu illadāga nīvilladiddaḍe
nānāgaballene ayyā?
Ādi anādi illadandu nīvilladiddaḍe
nānāgaballene ayya?
Muḷugi hōdavaḷa tegedukoṇḍu,
nim'ma tottina tottina paḍidottina magaḷendu
rakṣaṇeya māḍida śiśuvāda kāraṇa
haḍadappaṇṇane enna karasthalakke
liṅgavāgi bandu nelegoṇḍanu.
Cennamallēśvarane enna manasthalakke
Prāṇavāgi bandu mūrtagoṇḍanu.
Ā karasthalada liṅgavanarcisi pūjisi
varava bēḍidaḍe tanuva tōridanu;
ā tanuviḍidu mahāghanava kaṇḍe;
ā ghanaviḍidu manava niliside.
Manava nilisi nōḍuvannakka
prāṇada neleyanaride praṇavavanondugūḍide.
Kāṇabārada kadaḷiyane hokku
nūna kadaḷiya dāṇṭide; jñānajyōtiya kaṇḍe.
Tānu tānāgippa mahābeḷaginalli ōlāḍi sukhiyādenayyā,
cennamallēśvarana karuṇada śiśuvāda kāraṇadinda
appaṇṇapriya cennabasavaṇṇa.