Index   ವಚನ - 70    Search  
 
ಪೃಥ್ವಿಯನೆ ಆದಿಯ ಮಾಡಿ, ಅಪ್ಪುವಿನಲ್ಲಿ ಗೋಡೆಯನಿಕ್ಕಿ, ಅಗ್ನಿಯನೆ ಅಪ್ಪುವಿನೊಳಗೆ ಹುದುಗಿಸಿ, ಅಸ್ತಿಯನೆ ಗಳುವ ಮಾಡಿ, ವಾಯುವನೆ ಬೀರಿ, ಆಕಾಶವನೆ ಹೊದಿಸಿ, ಸಹಸ್ರದಳ ಕಮಲವನೆ ಮೇಲುಕಟ್ಟ ಕಟ್ಟಿ, ಬಯಲಮಂಟಪವ ಶೃಂಗಾರವ ಮಾಡಿ, ಒಡೆಯನ ಬರವ ಹಾರುತಿದ್ದೆನಯ್ಯಾ. ಒಡೆಯನ ಬರವ ಹಾರೈಸುವ ಅವಸ್ಥೆಯನೆ ಕಂಡು, ಹಡದಪ್ಪಣ್ಣನೆ ಕರ್ಪುರದ ಸಿಂಹಾಸನವಾಗಿ ನಿಂದರು. ಅದಕ್ಕೆ ಚೆನ್ನಮಲ್ಲೇಶ್ವರನೆ ಜ್ಯೋತಿರ್ಮಯಲಿಂಗವಾಗಿ ಬಂದು ನೆಲೆಗೊಂಡರು. ಜ್ಯೋತಿರ್ಮಯಲಿಂಗವು ಕರ್ಪುರವು ಏಕವಾಗಿ ಪ್ರಜ್ವಲಿಸಿ ಪರಮಪ್ರಕಾಶವಾಯಿತ್ತು. ಈ ಬೆಳಗಿನಲ್ಲಿ ನಾ ನಿಜಮುಕ್ತಳಾದೆನಯ್ಯಾ ಚೆನ್ನಮಲ್ಲೇಶ್ವರ, ಅಪ್ಪಣ್ಣಪ್ರಿಯ ಚೆನ್ನಬಸವಣ್ಣಾ.