Index   ವಚನ - 73    Search  
 
ಒಂದು ಹುತ್ತಕ್ಕೆ ಒಂಬತ್ತು ಬಾಗಿಲು. ಒಂದು ಸರ್ಪ ಒಂಬತ್ತು ಬಾಗಿಲಲ್ಲಿಯೂ ನೋಡುತ್ತಿಪ್ಪುದು. ಒಂಬತ್ತು ಬಾಗಿಲಿಗೆ ಕದವನಿಕ್ಕಿ, ಒಂದು ಬಾಗಿಲ ಅಗುಳಿ ದಾರವಂದವನಿಕ್ಕಿ ಬಲಿಯಲು, ತಿರುಗುವುದಕ್ಕೆ ತಾವ ಕಾಣದೆ, ಇರುವುದಕ್ಕೆ ಇಂಬ ಕಾಣದೆ, ನಿಲುವುದಕ್ಕೆ ಎಡೆಯ ಕಾಣದೆ, ಉರಿ ಎದ್ದು ಊರ್ಧ್ವಕ್ಕೇರಲು, ಶರಧಿ ಬತ್ತಿತ್ತು, ಅಲ್ಲಿದ್ದ ಖಗಮೃಗವೆಲ್ಲ ದಹನವಾದವು. ಸರೋವರವೆಲ್ಲ ಉರಿದು ಹೋದವು, ಕತ್ತಲೆ ಹರಿಯಿತ್ತು. ಮುಂದೆ ದಿಟ್ಟಿಸಿ ನೋಡುವನ್ನಕ್ಕ ಇಟ್ಟೆಡೆಯ ಬಾಗಿಲು ಸಿಕ್ಕಿತ್ತು. ಆ ಇಟ್ಟೆಡೆಯ ಬಾಗಿಲ ಹೊಕ್ಕು ಹೊಡೆಕರಿಸಿ, ಪಶ್ಚಿಮದ ಕದವ ತೆಗೆದು, ಬಟ್ಟ ಬಯಲಲ್ಲಿ ನಿಂದು ನಾನೆತ್ತ ಹೋದೆಹೆನೆಂದರಿಯೆನಯ್ಯಾ ಅಪ್ಪಣ್ಣಪ್ರಿಯ ಚೆನ್ನಬಸವಣ್ಣಾ.