ದಾರಿವಿಡಿದು ಬರಲು ಮುಂದೆ ಸರೋವರವ ಕಂಡೆ.
ಆ ಸರೋವರದ ಮೇಲೆ ಒಂದು ದಳದ ಕಮಲವ ಕಂಡೆ,
ಆ ಕಮಲವರಳಿ ವಿಕಸಿತವಾಗಿತ್ತು, ಪರಿಮಳವೆಸಗಿತ್ತು.
ಆ ಪರಿಮಳದ ಬೆಂಬಳಿವಿಡಿದು ಹೋಗುತ್ತಿರಲು,
ಮುಂದೆ ಒಂದು ದಾರಿಯ ಕಂಡು,
ಆ ಮುಂದಳ ದಾರಿಯಲ್ಲಿ ಹೋದವರೆಲ್ಲರು
ನಿಂದೆ ಕುಂದುಗಳಿಗೊಳಗಾಗಿ ಸಂದುಹೋದರು.
ಇದ ಕಂಡು ನಾ ಹೆದರಿಕೊಂಡು ಎಚ್ಚತ್ತು,
ಚಿತ್ತವ ಸುಯಿದಾನವ ಮಾಡಿ,
ಹಿತ್ತಲ ಬಾಗಿಲ ಕದವ ತೆಗೆದು
ನೋಡಿದಡೆ ಬಟ್ಟಬಯಲಾಗಿದ್ದಿತ್ತು.
ಆ ಬಟ್ಟಬಯಲೊಳಗೆ ಮಹಾಬೆಳಗನೆ ನೋಡಿ
ನಾ ಎತ್ತ ಹೋದೆನೆಂದರಿಯೆನಯ್ಯಾ
ಅಪ್ಪಣ್ಣಪ್ರಿಯ ಚೆನ್ನಬಸವಣ್ಣಾ.