ಪ್ರಥಮಪಾದದಲ್ಲಿ ರುದ್ರತತ್ವ,
ಅದು ಘಟಿಸಿದಲ್ಲಿ ಈಶ್ವರತತ್ವ.
ಆ ಉಭಯಲೀಲೆಯಡಗಿದಲ್ಲಿ ಸದಾಶಿವತತ್ವ.
ಈ ತ್ರಿವಿಧಲೀಲೆ ಏಕಾರ್ಥವಾದಲ್ಲಿ
ಪರಶಿವತತ್ವದ ಪರಮಪ್ರಕಾಶ.
ಇದರಿಂದ ಮೀರುವ ತೆರನುಂಟಾದಡೆ
ನೀವು ಹೇಳಿ, ನಾ ಮಾಕೊಳ್ಳೆನು.
ನೀವು ಹೇಳಿದಂತೆ ಮಹಾಪ್ರಸಾದ ಪೂರ್ವದಲ್ಲಿ.
ಆರು ಶೈವದ ಭೇದ, ಮೂರು ಶೈವದ ಭಜನೆ,
ಷಡ್ದರ್ಶನದ ತರ್ಕ.
ಇಂತಿವೆಲ್ಲವನುದ್ಧರಿಸಬಂದ ಪ್ರಭು ಬಸವಣ್ಣ ಚೆನ್ನಬಸವಣ್ಣ
ಇಂತಿವರೊಳಗಾದ ಪ್ರಮಥರು ಸ್ವತಂತ್ರ ಸಂಬಂಧಿಗಳು
ಸುಮನರು ವಿಮಲರು ಖಂಡಿತರು ಅಖಂಡಿತರು
ಪೂರ್ಣರು ಪರಿಪೂರ್ಣರು ಸೀಮರು
ನಿಸ್ಸೀಮರು ದ್ವೈತರು ಅದ್ವೈತರು,
ಸಮಯಕ್ಕೆ ಬಹರು, ಸಮಯಕ್ಕೆ ಬಾರದೆ ಇಹರು,
ಕಟ್ಟಿಂಗೆ ಬಹರು, ಕಟ್ಟಿ ಮೀರಿ ಒಪ್ಪಿಪ್ಪರು.
ಇಂತೀ ಪ್ರಮಥರಲ್ಲದ ಏಳುನೂರೆಪ್ಪತ್ತು ಅಮರಗಣಂಗಳು,
ಬಂದ ಬಂದ ಸ್ಥಳದಲ್ಲಿ ಮುಕ್ತರು,
ನಿಂದ ನಿಂದ ಸ್ಥಳದಲ್ಲಿ ನಿರುತರು.
ಮೂರುಸ್ಥಲದ ಮೂರ್ತಿಯಂ ಕಂಡು,
ಆರುಸ್ಥಲದ ಕೂಡಿಕೊಂಡು,
ಮೂವತ್ತಾರರಲ್ಲಿ ಅರಿದು,
ಇಪ್ಪತ್ತೈದರಲ್ಲಿ ವೇಧಿಸಿ,
ನೂರರಲ್ಲಿ ಸಂದಳಿದು,
ಒಂದರಲ್ಲಿ ನಿಂದುದಕ್ಕೆ ಕುರುಹಾವುದಯ್ಯಾ ಎಂದಡೆ,
ಮಾಯಾಗುಣಮಲ ನಾಸ್ತಿಯಾಗಿರಬೇಕು,
ಹಾಟಕೇಶ್ವರಲಿಂಗವನರಿದ ಶರಣನ ಇರವು.