ಹೆಣ್ಣು ಗಂಡು ಕೂಡಿ ರಚಿಸಿದ ಬಣ್ಣದ ಕೊತ್ತಳದೊಳು
ಮನೆಮಾಡಿಕೊಂಡಿರ್ಪ ದುರ್ಗಿಯ ಕಂಡೆನಿಂದು.
ಆಕೆಯ ಮುಖ ಮೂರು, ಕಣ್ಣಾರು, ಬಾಯಿ ಮೂರು,
ನಾಸಿಕ ಮೂರು, ನಾಲಗೆ ಮೂರು, ಮೊಲೆ ಏಳು,
ಅಂಗವೆರಡು, ಶೃಂಗಾರ ನಾಲ್ಕು, ಬಯಕೆ ಎಂಟು,
ಬಾಳ್ವೆ ಎರಡು, ದುಃಖವೈದು.
ದುರಿತ ನೂರಿಪ್ಪತ್ತರ ದುಮ್ಮಾನದಲ್ಲಿ
ಮಾಯದ ರಕ್ಷಿಯ ಮುಂದಿಟ್ಟುಕೊಂಡು,
ಛಾಯದ ಕೊಳಗದಲಳೆವುತ್ತಲಳೆವುತ್ತ
ಮುಡಿ ಮಾಸಿತೆಂದು ಮಾನುನಿ ಮರುಗಿ,
ರಾಸಿಗೆ ಕಾಲ ಮಾಡಿ, ಮಾನಕೆ ತಲೆಯನಿಟ್ಟು,
ರೋಷದಿಂದ ಶೋಕಂಗೈವುತ್ತಿಪ್ಪ ಅಂಗನೆ,
ಮುಖ ಮೂರ ತಿರುವೆ, ಮೂರುಲೋಕವದರಿದ್ದ ಕಂಡೆ.
ಕಣ್ಣಾರಲ್ಲಿ ಉರಿವುತ್ತಿಪ್ಪ ಅಗ್ನಿ ಲೋಕವ ಸುತ್ತುವುದ ಕಂಡೆನು.
ಬಾಯಿ ಮೂರು ತೆರೆಯೆ ಎಣೆಯಿಲ್ಲದ ತಾರೆಯ ಕಂಡೆನು.
ಏಳು ಮೊಲೆಯೊಳಗಣ ವಿಷ ಹೊರಹಬ್ಬಿ ಹರಿವುದ ಕಂಡೆನು.
ಅಂಗವೆರಡು ಅಲೆದಾಡುವುದ ಕಂಡೆನು.
ಶೃಂಗಾರವು ನಾಲ್ಕು ದಿಕ್ಕಿಗೆ ಬೆಳಗುವುದ ಕಂಡೆನು.
ಬಯಕೆ ಎಂಟು ಬ್ರಹ್ಮಾಂಡವ ಕೊಂಡು ಮುಣುಗುವುದ ಕಂಡೆನು.
ದುಃಖವೈದು ಮೊರೆಯಿಡುವುದ ಕಂಡೆನು.
ದುರಿತ ನೂರಿಪ್ಪತ್ತು ಧೂಳಿಗೊಟ್ಟಿಯ ಕೊಂಬುದ ಕಂಡೆ,
ಕೋಟೆಯ ಅರಸು ಬೆನ್ನೂರಿಲಿ ನಿಂದು
ತಾಪಸಬಡುತಿರ್ದ, ಮಾಯದುರಿತಕಂಜಿ.
ಇದೇನು ಚೋದ್ಯ ಹೇಳಾ!
ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
Art
Manuscript
Music
Courtesy:
Transliteration
Heṇṇu gaṇḍu kūḍi racisida baṇṇada kottaḷadoḷu
manemāḍikoṇḍirpa durgiya kaṇḍenindu.
Ākeya mukha mūru, kaṇṇāru, bāyi mūru,
nāsika mūru, nālage mūru, mole ēḷu,
aṅgaveraḍu, śr̥ṅgāra nālku, bayake eṇṭu,
bāḷve eraḍu, duḥkhavaidu.
Durita nūrippattara dum'mānadalli
māyada rakṣiya mundiṭṭukoṇḍu,
chāyada koḷagadalaḷevuttalaḷevutta
muḍi māsitendu mānuni marugi,
rāsige kāla māḍi, mānake taleyaniṭṭu,
rōṣadinda śōkaṅgaivuttippa aṅgane,
mukha mūra tiruve, mūrulōkavadaridda kaṇḍe.Kaṇṇāralli urivuttippa agni lōkava suttuvuda kaṇḍenu.
Bāyi mūru tereye eṇeyillada tāreya kaṇḍenu.
Ēḷu moleyoḷagaṇa viṣa horahabbi harivuda kaṇḍenu.
Aṅgaveraḍu aledāḍuvuda kaṇḍenu.
Śr̥ṅgāravu nālku dikkige beḷaguvuda kaṇḍenu.
Bayake eṇṭu brahmāṇḍava koṇḍu muṇuguvuda kaṇḍenu.
Duḥkhavaidu moreyiḍuvuda kaṇḍenu.
Durita nūrippattu dhūḷigoṭṭiya kombuda kaṇḍe,
kōṭeya arasu bennūrili nindu
tāpasabaḍutirda, māyaduritakan̄ji.
Idēnu cōdya hēḷā!
Paramaguru paḍuviḍi sid'dhamallināthaprabhuve.