Index   ವಚನ - 64    Search  
 
ನಗನೂರಠಾಣ್ಯದ ತೆಳಗಿಪ್ಪ ಇಪ್ಪತ್ತೈದು ಹಳ್ಳಿಯ ಸಾಗಿಸಿ ಕೋರನಡಸುವ ಕಾರಕೂನರೈವರು, ಕಾಡಹೊಲನ ಕಂಡಣಿಯ ಮಾಡುತಿರೆ; ಹಾರುವರು ಹರಿಕಾರರು, ಗೌಡರಿಬ್ಬರು ಗೊಮಗುಸುಕರು, ಊರೊಳಹೊರಗೆ ಬಾರದ ಸೇನಬೋವರು, ಕಿಂಚಿತು ಉಳಿಯಗೊಡದ ಠೇವಣಿಯನಿಕ್ಕುವರು. ಹೃದಯಧರರು ಹುಸಿಕಾರರು, ರಾಶಿಯನೊಕ್ಕುವ ಒಕ್ಕಲಿಗರು ವಂಚಕರು, ಊರ ಪಂಚಾಳರು ಪ್ರಪಂಚಿಗಳು, ಅಗಸ ಮೈಲಿಗೆಗಳ್ಳ, ನಾಯಿಂದ ಕೇಶಭುಂಜಕ, ಕುರುಬ ಭುಸಗೊಂಡ, ಕುಂಬಾರ ತಿಗುರಿಸುತ್ತಳ, ತಳವಾರರು ಮರೆದೊರಗುವರು, ಬಾರಿಕ ಬಲುಬೆದಕ, ಹೊಲೆಯ ಹುಸಿಕಾರ, ಮಾದಿಗ ಮಾಂಸಭುಂಜಕ; ರಾಜ್ಯದ ತಪ್ಪ ವಿಚಾರಿಸುವ ರಾಜ ಮಹಾಕ್ರೋಧಿ, ಪರಿವಾರ ಬಾಧಕರು. ಇಂತಿವರೊಳೊಬ್ಬನೂ ಮೋಹಿಯಲ್ಲ! ನಾನೆಂತು ಜೀವಿಪೆನಯ್ಯಾ? ಕಾಯಪುರದ ಸಂಭ್ರಮದ ಮಾಯಾಪಾಶಕೆನ್ನನಿಕ್ಕಿ ನೀನಗಲಿದೆಯಯ್ಯಾ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.