Index   ವಚನ - 71    Search  
 
ಮಾಯಾತಮಂಧವೆಂಬ ಕತ್ತಲೆಯು ಮುಸುಕಿ ಮುಂದುಗಾಣದೆ ಅರುಹಿರಿಯರೆಲ್ಲರು, ಸಿದ್ಧಸಾಧ್ಯರೆಲ್ಲರು ಕಣ್ಗಾಣದೆ ಮರೆದೊರಗಿದರು. ಅದು ಎಂತೆಂದೊಡೆ: ವಸಂತತಿಲಕವೃತ್ತ - ``ಮಾಯಾತಮಂಧ ಮಹಾಘೋರ ಕಾಲವಿಷಂ ಜ್ಞಾನಸ್ಯ ಸೂರ್ಯ ನಚ ಸಿದ್ಧ ಸಾಧ್ಯಂ ಭೂಲೋಕ ತ್ರಿಗುಣಾಕಾರ ಮಧ್ಯ ಶಯನೇಶದೇಹಿ ಶಿವಮುಕ್ತಿರಹಿತ ಭವಯಂತ್ರ ಕ್ರೀಡಾದಿಜನಿತಂ'' (?) ಎಂದುದಾಗಿ, ಇದು ಕಾರಣ, ತನುವೆಂಬ ಉರುರಾಜ್ಯಕ್ಕೆ ಜ್ಞಾನಸೂರ್ಯನ ಮುಳುಗಿಸಿ ಅನುದಿನ ಎನ್ನ ಕಣ್ಗೆಡಿಸಿ, ಮಾಯಾತಮಂಧವೆಂಬ ಕತ್ತಲೆಗೆ ನಡೆಸಿ, ಅಜ್ಞಾನವೆಂಬ ಕೊರಡನೆಡವಿಸಿ, ತಾಪತ್ರಯವೆಂಬ ಅಗ್ನಿಗಿರಿಯನಡರಿಸಿ, ಮನವಿಕಾರಗಳೆಂಬ ಭೂತಗಳ ಹರಿಯಬಿಟ್ಟು, ಅರಿಷಡ್ವರ್ಗವೆಂಬ ಕೂರಸಿಯ ಸಿಗಿಸಿ, ಷಡ್ಭಾವವೈಕರಣಗಳೆಂಬ ಹಳ್ಳಕೊಳ್ಳ ನಡುವಿಕ್ಕಿ ಎನ್ನ ಕಾಡುತಿರ್ದೆಯಲ್ಲ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.