Index   ವಚನ - 88    Search  
 
ಅಂತರಂಗದ ಅಷ್ಟಮದ ಅವಾವೆಂದರೆ ಹೇಳುವೆ ಕೇಳಿರಣ್ಣಾ: ಪೃಥ್ವಿಮದ ಸಲಿಲಮದ ಪಾವಕಮದ ಪವನಮದ ಅಂಬರಮದ ರವಿಮದ ಶಶಿಮದ ಆತ್ಮಮದವೆಂಬ ಅಷ್ಟಮೂರ್ತಿಯ ಮದಂಗಳು. ಇವರ ಗುಣಧರ್ಮಕರ್ಮವೆಂತೆಂದಡೆ, ಅದಕ್ಕೆ ವಿವರ; ಪೃಥ್ವಿಮದವೆತ್ತಿದಲ್ಲಿ ತನುಗುಣಭರಿತನಾಗಿ, ಆಭರಣ ಅನುಲೇಪನ ತಾಂಬೂಲವಂ ಬಯಸುತ್ತಿಹನು. ಸಲಿಲಮದವೆತ್ತಿದಲ್ಲಿ ಸಂಸಾರಭರಿತನಾಗಿ, ಎನಗೆ ಬೇಕು, ಮನೆಗೆ ಬೇಕು, ಮಕ್ಕಳಿಗೆ ಬೇಕು ಎನುತಿಹನು. ಪಾವಕಮದವೆತ್ತಿದಲ್ಲಿ ಕಾಮರಸಭರಿತನಾಗಿ, ಕರಸಬೇಕು ನುಡಿಸಬೇಕು ಆಲಿಂಗಿಸಬೇಕು ಎನುತಿಹನು. ಪವನಮದವೆತ್ತಿದಲ್ಲಿ ಕೋಪಾಗ್ನಿಭರಿತನಾಗಿ, ಕೊಂದೇನು ತಿಂದೇನು ಸಾಧಿಸೇನು ಭೇದಿಸೇನು [ಎನುತಿಹನು]. ಶಶಿಮದವೆತ್ತಿದಲ್ಲಿ ಚಿಂತಾಭರಿತನಾಗಿ, ಆದೀತೊ ಆಗದೊ, ಇದ್ದೀತೊ ಇಲ್ಲವೊ ಎನುತಿಹನು. ಆತ್ಮಮದವೆತ್ತಿದಲ್ಲಿ ಅಹಂಕಾರಭರಿತನಾಗಿ, ಎನಗಿಂದು ಅಧಿಕರಿಲ್ಲ, ಎನಗಿಂದು ಇದಿರಿಲ್ಲವೆಂದು ಅಹಂಭಾವದಿಂದ ಅಹಂಕರಿಸುತ್ತಿಹನು. ಇಂತೀ ಅಷ್ಟಮೂರ್ತಿಮದಂಗಳ ಭ್ರಾಂತಿನ ಬಲೆಯೊಳಿಟ್ಟೆನ್ನನಗಲದಿರು ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.