ಹೊಲೆಯೊಳು ಹುಟ್ಟಿ, ಹೊಲೆಯೊಳು ಬೆಳೆದು,
ಕುಲಮದಕೆ ಹೋರಾಡುತಿಪ್ಪರಯ್ಯಾ.
ಅದು ಎಂತೆಂದರೆ:
ಹುಟ್ಟುವುದು ಹೊಲೆ, ಹೊಂದುವುದು ಹೊಲೆ.
ಬಾಹ್ಯದ ಹೊಲೆಯ ಹೇಳೇನೆಂದರಳವಲ್ಲ.
ಕರುಳ ಜಾಳಿಗೆ, ಅಮೇಧ್ಯದ ಹುತ್ತು, ರಕ್ತದ ಮಡು,
ಮಾಂಸದ ಕೊಗ್ಗೆಸರು, ಕೀವಿನ ಹೊಲಸು,
ಕ್ರಿಮಿಕೀಟಕ ಜಂತಿನ ರಾಸಿ, ಎಲುವಿನ ಹಂಜರು,
ಚರ್ಮದ ಮೇಲುಹೊದಿಕೆ.
ಇಂತೀ ಹೊಲೆಯೊಳು ಜನಿತವಾದ
ಕರ್ಮಕಾಯವೆಂದರಿಯದೆ
ಕುಲಮದಕ್ಕೆ ಹೋರಾಡುವರು.
ಕುಲವ ಕೇಳೇನೆಂದರೆ,
ಇಂದ್ರ ಶೂದ್ರ, ಬ್ರಹ್ಮ ವೈಶ್ಯ, ವಿಷ್ಣು ಕ್ಷತ್ರಿಯ,
ಈಶ್ವರ ಬ್ರಾಹ್ಮಣ.
ಸಾಕ್ಷಿ:
``ಪಿತಾಮಹಸ್ತು ವೈಶ್ಯಸ್ಯ ಕ್ಷತ್ರಿಯಸ್ಯ ಪರೋ ಹರಿಃ|
ಬ್ರಾಹ್ಮಣೋ ಭಗವಾನ್ ರುದ್ರಃ ಇಂದ್ರಃ ಶೂದ್ರಕುಲಸ್ಯ ಚ|| ''
ಎಂದುದಾಗಿ, ಇನ್ನುಳಿದ ಮುನಿಕುಲ ಕೇಳ್ವರೆ-
ಹೊಲೆಮಾದಿಗರ ಅಗಸರ ಬಸುರಲ್ಲಿ ಬಂದು
ಶಿವನ ಪೂಜೆಯ ಮಾಡಿ, ಶಿವಕುಲವಾದುದನರಿಯದೆ
ಕುಲಕ್ಕೆ ಹೋರಾಡುತಿಪ್ಪರಯ್ಯಾ.
ಸಾಕ್ಷಿ:
``ಚಾಂಡಾಲವಾಟಿಕಾಯಾಂ ವಾ ಶಿವಭಕ್ತಃ ಸ್ಥಿತೋ ಯದಿ|
ತತ್ಶ್ರೇಣೀ ಶಿವಲೋಕಸ್ಯ ತದ್ಗೃಹಂ ಶಿವಮಂದಿರಂ||
ಯಸ್ಯ ಚಿತ್ತಂ ಶಿವೇ ಲೀನಂ ತಸ್ಯ ಜಾತಿಃ ಕರೋತಿ ಕಿಂ|
ಶಿವಲಿಂಗಶೀಲಬುದ್ಧಿಂ ಕುರ್ವಣಮೇವ ಪಾತಕಂ||''
ಎಂದುದಾಗಿ, ಇದುಕಾರಣ,
ಶಿವಕುಲವಾದವರೊಳು ಕುಲವನರಸುವರುಂಟೆ? ಅರಸಲಿಲ್ಲ.
ಅರಸಿದರೆ ಪಾತಕ. ಅದಕ್ಕೆ ಸಾಕ್ಷಿ:
``ಶಿವಕುಲಂ ಶಿವಭಕ್ತಸ್ಯ ಅನ್ಯಾಶ್ರಯೇಷು ನಿಂದಕಃ|
ಶ್ವಾನಯೋನಿಶತಂ ಗತ್ವಾ ರೌರವಂ ನರಕಂ ವ್ರಜೇತ್||''
ಎಂದುದಾಗಿ, ಪರಮಾತ್ಮಾ, ನಿನ್ನ ಕುಲವಾದವರಿಗೆ ಕುಲವನೆತ್ತಿನುಡಿವ
ಪಾತಕರನೆನಗೊಮ್ಮೆ ತೋರದಿರು
ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
Art
Manuscript
Music
Courtesy:
Transliteration
Holeyoḷu huṭṭi, holeyoḷu beḷedu,
kulamadake hōrāḍutipparayyā.
Adu entendare:
Huṭṭuvudu hole, honduvudu hole.
Bāhyada holeya hēḷēnendaraḷavalla.
Karuḷa jāḷige, amēdhyada huttu, raktada maḍu,
mānsada koggesaru, kīvina holasu,
krimikīṭaka jantina rāsi, eluvina han̄jaru,
carmada mēluhodike.
Intī holeyoḷu janitavāda
karmakāyavendariyade
kulamadakke hōrāḍuvaru.
Kulava kēḷēnendare,Indra śūdra, brahma vaiśya, viṣṇu kṣatriya,
īśvara brāhmaṇa.
Sākṣi:
``Pitāmahastu vaiśyasya kṣatriyasya parō hariḥ|
brāhmaṇō bhagavān rudraḥ indraḥ śūdrakulasya ca||''
endudāgi, innuḷida munikula kēḷvare-
holemādigara agasara basuralli bandu
śivana pūjeya māḍi, śivakulavādudanariyade
kulakke hōrāḍutipparayyā.
Sākṣi:
``Cāṇḍālavāṭikāyāṁ vā śivabhaktaḥ sthitō yadi|
tatśrēṇī śivalōkasya tadgr̥haṁ śivamandiraṁ||
yasya cittaṁ śivē līnaṁ tasya jātiḥ karōti kiṁ|
śivaliṅgaśīlabud'dhiṁ kurvaṇamēva pātakaṁ||''
endudāgi, idukāraṇa,
Śivakulavādavaroḷu kulavanarasuvaruṇṭe? Arasalilla.
Arasidare pātaka. Adakke sākṣi:
``Śivakulaṁ śivabhaktasya an'yāśrayēṣu nindakaḥ|
śvānayōniśataṁ gatvā rauravaṁ narakaṁ vrajēt||''
endudāgi, paramātmā, ninna kulavādavarige kulavanettinuḍiva
pātakaranenagom'me tōradiru
paramaguru paḍuviḍi sid'dhamallināthaprabhuve.
ಸ್ಥಲ -
ಬಹಿರಂಗದ ಅಷ್ಟಮದ ನಿರಸನಸ್ಥಲ