Index   ವಚನ - 104    Search  
 
ನೆನೆವ ಜಿಹ್ವೆ[ಗೆ] ಕಾಮನ ನೆನಸಿದೆ, ನೋಡುವ ಕಂಗಳಿಗೆ ಕಾಮನ ನೋಡಿಸಿದೆ, ಕೇಳುವ ಕರ್ಣಕ್ಕೆ ಕಾಮವನೆ ಕೇಳಿಸಿದೆ, ವಾಸಿಸುವ ನಾಸಿಕಕ್ಕೆ ಕಾಮವನೆ ವಾಸಿಸಿದೆ, ಮುಟ್ಟುವ ಹಸ್ತಕ್ಕೆ ಕಾಮವನೆ ಮುಟ್ಟಿಸಿದೆ. ಅದು ಎಂತೆಂದೊಡೆ: ನೆನೆವ ಜಿಹ್ವೆ ಪರಧನ ಪರಸ್ತ್ರೀಯರ ನೆನೆವುದು, ನೋಡುವ ಕಂಗಳು ಪರಧನ ಪರಸ್ತ್ರೀಯರನೆ ನೋಡುವವು, ಕೇಳುವ ಕರ್ಣ ಪರಧನ ಪರಸ್ತ್ರೀಯರ ಪರನಿಂದ್ಯವನೆ ಕೇಳುವವು, ವಾಸಿಸುವ ನಾಸಿಕ ಪರಧನ ಪರಸ್ತ್ರೀಯರ ವಾಸಿಸುವುದು, ಮುಟ್ಟುವ ಹಸ್ತ ಪರಧನ ಪರಸ್ತ್ರೀಯರನೆ ಮುಟ್ಟುವುದು. ಇಂತೀ ಪಂಚೇಂದ್ರಿಯಮುಖದಲ್ಲಿ ಕಾಮವೆ ಮುಖ್ಯವಾಗಿಪ್ಪುದಯ್ಯ. ಕಾಮ ಕ್ರೋಧ ಲೋಭ ಮೋಹ ಮದ ಮತ್ಸರದ ಸೀಮೆಗೆಳಸದ ನಿಸ್ಸೀಮ ಶರಣಂಗೆ ನಮೋ ನಮೋ ಎಂಬೆನಯ್ಯಾ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.