Index   ವಚನ - 111    Search  
 
ಕಾಮವು ಲಿಂಗಮುಖವಾಗಿ, ಕ್ರೋಧವು ಲಿಂಗಮುಖವಾಗಿ, ಲೋಭವು ಲಿಂಗಮುಖವಾಗಿ, ಮೋಹವು ಲಿಂಗಮುಖವಾಗಿ, ಮದವು ಲಿಂಗಮುಖವಾಗಿ, ಮತ್ಸರವು ಲಿಂಗಮುಖವಾಗಿ ಇಪ್ಪಾತನೆ ನಿರ್ಮೋಹಿ. ಅದು ಎಂತೆಂದೊಡೆ: ಪರಧನ ಪರಸ್ತ್ರೀಯ ಕಾಮಿಸುವಂತೆ ಲಿಂಗವ ಕಾಮಿಸುವುದೆ ಕಾಮ. ಪರರೊಳು ಕ್ರೋಧಿಸುವಂತೆ ಕರ್ಮವಿರಹಿತನಾದರೆ ಕ್ರೋಧ. ಅರ್ಥ ಸ್ತ್ರೀಯರ ಮೇಲೆ ಲೋಭವಿಡುವಂತೆ ಲಿಂಗದೊಡನೆ ಲೋಭವಿಟ್ಟು ಲಿಂಗವ ಕೂಡಬಲ್ಲರೆ ಲೋಭ. ಅನ್ಯರ ಮೋಹಿಸುವಂತೆ ಲಿಂಗವ ಮೋಹಿಸಬಲ್ಲರೆ ಮೋಹ. ಅನ್ನಮದ ಪ್ರಾಯಮದ ತಲೆಗೇರುವಂದದಿ ಲಿಂಗಮದನಾಗಿರಬಲ್ಲರೆ ಮದ. ಅನ್ಯರೊಡನೆ ಮತ್ಸರಿಸುವಂತೆ ಲಿಂಗದೊಡನೆ ಮತ್ಸರಿಸಿ ಶರಣಕೃಪೆಯ ಪಡೆಯಬಲ್ಲರೆ ಮತ್ಸರ. ಇಂತಪ್ಪ ಕಾಮ ಕ್ರೋಧ ಲೋಭ ಮೋಹ ಮದ ಮತ್ಸರದಲ್ಲಿ ಲಿಂಗಮುಖವಾಗಿಪ್ಪ ಶರಣರ ಪಾದಕ್ಕೆ ನಮೋ ನಮೋ ಎಂಬೆನಯ್ಯಾ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.