Index   ವಚನ - 127    Search  
 
ಶ್ರೋತ್ರ ತ್ವಕ್ಕು ನೇತ್ರ ಜಿಹ್ವೆ ಘ್ರಾಣವೆಂಬ ಪಂಚೇಂದ್ರಿಯಂಗಳು. ಸಾಕ್ಷಿ: ``ಶ್ರೋತ್ರತ್ವಕ್‍ನೇತ್ರಜಿಹ್ವಾಶ್ಚ ಘ್ರಾಣಂ ಪಂಚೇಂದ್ರಿಯಾಸ್ತಥಾ| ಆಕಾಶ ಅಗ್ನಿವಾರ್ಯುಶ್ಚ ಅಪ್‍ಪೃಥ್ವೀ ಕ್ರಮೇಣ ಚ||'' ಎಂದುದಾಗಿ, ಇವಕ್ಕೆ ವಿವರ: ಶ್ರೋತ್ರೇಂದ್ರಿಯಕ್ಕೆ ಆಕಾಶವೆಂಬ ಮಹಾಭೂತ, ದಶದಿಕ್ಕುಗಳೆ ಅಧಿದೈವ, ಅದಕ್ಕೆ ಶಬ್ದ ವಿಷಯ. ಅಕ್ಷರಾತ್ಮಕ ಅನಕ್ಷರಾತ್ಮಕ ಇವು ಎರಡು ಅಕ್ಷರ ಭೇದ. ತ್ವಗಿಂದ್ರಿಯಕ್ಕೆ ವಾಯುವೆಂಬ ಮಹಾಭೂತ, ಚಂದ್ರನಧಿದೇವತೆ ಅದಕ್ಕೆ ಸ್ಪರುಶನ ವಿಷಯ; ಮೃದು ಕಠಿಣ ಶೀತ ಉಷ್ಣ ಇವು ನಾಲ್ಕು ಸ್ಪರುಶನ ಭೇದ. ನೇತ್ರೇಂದ್ರಿಯಕ್ಕೆ ಅಗ್ನಿಯೆಂಬ ಮಹಾಭೂತ, ಸೂರ್ಯನಧಿದೇವತೆ. ಅದಕ್ಕೆ ರೂಪ ವಿಷಯ; ಶ್ವೇತಪೀತ ಹರಿತ ಮಾಂಜಿಷ್ಟ ಕೃಷ್ಣ ಕಪೋತವರ್ಣ ಇವಾರು ರೂಪಭೇದ. ಜಿಹ್ವೇಂದ್ರಿಯಕ್ಕೆ ಅಪ್ಪುವೆಂಬ ಮಹಾಭೂತ, ವರುಣನಧಿದೇವತೆ. ಅದಕ್ಕೆ ರಸ ವಿಷಯ; ಮಧುರ ಆಮ್ಲ ತಿಕ್ತ ಕಟು ಕಷಾಯ ಲವಣ ಇವಾರು ರಸಭೇದ. ಘ್ರಾಣೇಂದ್ರಿಯಕ್ಕೆ ಪೃಥ್ವಿಯೆಂಬ ಮಹಾಭೂತ. ಅಶ್ವಿನಿ ಅಧಿದೇವತೆ, ಇದಕ್ಕೆ ಗಂಧ ವಿಷಯ; ಸುಗಂಧ ದುರ್ಗಂಧವೆರಡು ಗಂಧ ಭೇದ. ಇಂತೀ ಪಂಚೇಂದ್ರಿಯೆಂಬ ಶುನಕ ಕಂಡಕಡೆಗೆ ಹರಿಯುತಿವೆ. ಈ ಪಂಚೇಂದ್ರಿಯವ ನಿರಸನವ ಮಾಡಿ, ಪಂಚವದನನೊಳು ಬೆರದಿಪ್ಪ ನಿರ್ವಂಚಕ ಶರಣಂಗೆ ನಮೋ ನಮೋ ಎಂಬೆನಯ್ಯಾ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.