Index   ವಚನ - 128    Search  
 
ಮೇಷನ ದನಿಗೇಳಿ ಹುಲಿ ಬಲಿಯ ಬೀಳ್ವಂತೆ, ಕರ್ಣ ಹರನಿಂದ್ಯ ಗುರುನಿಂದ್ಯವ ಕೇಳುವುದು. ಶಿವಮಂತ್ರ ಶಿವಸ್ತೋತ್ರ ಶಿವಾಗಮ ಶಿವಸೂತ್ರವ ಕೇಳದೆ ಕರ್ಮಗುರಿಯಾಗುವದು ಈ ಶ್ರೋತ್ರೇಂದ್ರಿಯ. ಕರಿಯು ಸ್ಪರುಶನೇಂದ್ರಿಯದಲ್ಲಿ ಮಡಿದಂತೆ, ಪರಧನ ಪರಸ್ತ್ರೀ ಪರರನ್ನವ ಮುಟ್ಟೇನೆಂಬುದೀ ಹಸ್ತ. ಶಿವಪೂಜೆ ಶಿವಲಿಂಗವ ಮುಟ್ಟಿ ಶಿವಜಪವನೆಣಿಸದೆ ಅನ್ಯಕ್ಕೆ ಗುರಿಯಾಯಿತ್ತು ತ್ವಗಿಂದ್ರಿಯ. ದೀಪವ ಕಂಡು ಮುಟ್ಟುವ ಪತಂಗನಂತೆ ನಯನೇಂದ್ರಿಯ. ಪರಧನ ಪರಸ್ತ್ರೀಯ ಆಟ ನೋಟ ಪರಾನ್ನವ ನೋಡಿ ಮರುಳಾಗಿ ಶಿವಲಿಂಗ ಶಿವಪೂಜೆಗೆ ಅನಿಮಿಷದೃಷ್ಟಿಯಿಡದೆ ಕೆಡುವುದೀ ನಯನೇಂದ್ರಿಯ. ಕೀಳುಮಾಂಸದ ಸವಿಗೆ ಗಂಟಲಗಾಣವ ಬೀಳುವ ಮೀನಿನಂತೆ ಜಿಹ್ವೇಂದ್ರಿಯ. ಹರನಿಂದೆ ಗುರುನಿಂದೆ ಪರನಿಂದ್ಯವ ಮಾಡಿ, ಕಾಳಗವಾರ್ತೆಯನಾಡಿ, ಪುರಾತರ ವಚನ ಶಿವಸ್ತುತ್ಯ ಶಿವಮಂತ್ರ ಶಿವಾಗಮವನೋದದೆ ಕರ್ಮಕ್ಕೆ ಗುರಿಯಾಗುವದೀ ಜಿಹ್ವೇಂದ್ರಿಯ. ಕಂದ: ಶ್ರೀಕಂಠ ಶಿವನ ನೆನೆಯದೆ ಲೌಕಿಕ ವಾರ್ತೆಯನೆ ಪೊರಹುತ್ತಿರ್ದಪುದೆನ್ನೀ ಬಾಕುಳಿಕ ಜಿಹ್ವೆಯಿದರಿಂ ನಾ ಕರ ನೊಂದೆ ಪ್ರಸನ್ನಶಂಕರಲಿಂಗ | 1 | ಎನ್ನಯ ನಾಲಿಗೆಯ ನಿಮ್ಮಯ ಮನ್ನಣೆಯ ಮಹಾನುಭಾವಿಗಳ ಚರಣಕ್ಕಂ ಹೊನ್ನಹಾವುಗೆಯ ಮಾಡೆಲೆ ಪನ್ನಗಕಟಕಾ ಪ್ರಸನ್ನಶಂಕರಲಿಂಗ | 2 | ಕಾಳಗದ ವಾರ್ತೆಯಂ ಸ್ಮರ ಲೀಲೆಯ ಪದಗಳ ಗಳಹುತಿರ್ದಪುದೆನ್ನೀ. ನಾಲಗೆಯಂ ಬೇರುಸಹಿತಂ ಕೀಳುವರಿಲ್ಲಾ ಪ್ರಸನ್ನಶಂಕರಲಿಂಗ | 3 | ಈ ತೆರದಿ ಸಂಪಿಗೆಯ ಕುಸುಮದ ಪರಿಮಳಕೆರ[ಗಿ]ದಳಿ ಮೃತವಾದಂತೆ ನಾಸಿಕೇಂದ್ರಿಯ ಮಾಯಾದುರ್ಗಂಧಚಂದನವಾಸನೆಗೆಳಸಿ ಸ್ವಾನುಭಾವಸದ್ವಾಸನೆಯ ಮರೆದು ಕರ್ಮಕ್ಕೆ ಗುರಿಯಾಯಿತ್ತೀ ಘ್ರಾಣೇಂದ್ರಿಯ. ಇಂತೀ ಪಂಚೇಂದ್ರಿಯಂಗಳೆಂಬ ಶುನಿ ಕಂಡಕಡೆಗೆ ಹರಿದು ಭಂಗಬಡಿಸಿ ಕಾಡುತಿದೆ, ಇವಕಿನ್ನೆಂತೊ ಶಿವಶಿವ, ಇವಕ್ಕಿನ್ನೆಂತೊ ಹರಹರ. ಇವ ನಿರಸನವ ಮಾಡೇನೆಂದರೆನ್ನಳವಲ್ಲ, ನಿಮ್ಮ ಧರ್ಮ ಕಾಯೋ ಕಾಯೋ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.